ಕೇಂದ್ರ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಜ.7ರಂದು ಮೈಸೂರು ಬಂದ್‌ಗೆ ಕರೆ ನೀಡಿದ್ದು, ಇದಕ್ಕೆ ಹಲವಾರು ಉದ್ಯಮಿಗಳು, ವ್ಯಾಪಾರಿಗಳು ಬೆಂಬಲ ನೀಡಿದ್ದಾರೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.
ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ವ್ಯಸನವೆಂದು ಅಮಿತ್ ಷಾ ಹೇಳಿದ್ದಾರೆ. ಈ ರೀತಿ ಅವಹೇಳನ ಮಾಡುವ ಮೂಲಕ ಕೋಮುವಾದಿ, ಜಾತಿವಾದಿ ಮನಸ್ಥಿತಿ ಪ್ರತಿಬಿಂಬಿಸಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಅವರ ಹೇಳಿಕೆ ವಿರೋಧಿಸಿ ನಡೆದ ಬಂದ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ರೀತಿ ನಗರದಲ್ಲಿಯೂ ಕರೆ ನೀಡಿರುವ ಮಂಗಳವಾರದ ಬಂದ್‌ಗೆ ಬಹಳಷ್ಟು ಮಂದಿ ಬೆಂಬಲ ಸೂಚಿಸಿ, ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ಬಂದ್ ಆಚರಿಸಲು ನಿರ್ಧರಿಸಿದ್ದು, ಬಂದ್ ಹಿನ್ನೆಲೆಯಲ್ಲಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಹೆದ್ದಾರಿಗಳಲ್ಲಿ ವಾಹನ ಸಂಚಾರ ತಡೆ ಹಿಡಿಯಲಾಗುವುದು ಎಂದು ತಿಳಿಸಿದರು.
ಸಂಸದ ಯದುವೀರ್ ಅವರು ಮಾತನಾಡುವ ವೇಳೆ ದೇಶದಲ್ಲಿ ಇಂದಿರಾಗಾಂಧಿ ಸಂವಿಧಾನ ಇದೆ ಎಂದು ಹೇಳಿರುವುದು ಖಂಡನಾರ್ಹ. ಇಂದಿರಾ ಗಾಂಧಿ ಅವರು ರಾಷ್ಟ್ರಕ್ಕೆ ನೀಡಿರುವ ಕೊಡುಗೆಯ ಅರಿವು ಇವರಿಗಿಲ್ಲ. ಹೀಗಾಗಿ ಇವರು ಸಂವಿಧಾನ ಕುರಿತು ಹೆಚ್ಚು ಓದಬೇಕಾದ ಅಗತ್ಯವಿದೆ ಎಂದು ಕಿಡಿಕಾರಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅಂಬೇಡ್ಕರ್ ಹೋರಾಟ ಸಮಿತಿ ಕರೆ ನೀಡಿರುವ ಬಂದ್‌ನಲ್ಲಿ ಜಾತಿ-ಭೇದವಿಲ್ಲದೆ ವ್ಯಾಪಕವಾಗಿ ಬೆಂಬಲ ದೊರೆತಿದೆ. ಲಾರಿ ಮಾಲೀಕರು, ಆಟೋ, ಕ್ಯಾಬ್, ಟೆಂಪೋ ಮಾಲೀಕರು ಸಹ ಬೆಂಬಲ ಸೂಚಿಸಿದ್ದಾರೆ. ಎಪಿಎಂಸಿಯಲ್ಲಿಯೂ ಉತ್ತಮ ಸ್ಪಂದನೆ ದೊರೆತಿದೆ. ಆದರೆ, ಈ ವೇಳೆ ಮೆಡಿಕಲ್ ಶಾಪ್, ಹಾಲು ಮೊದಲಾದ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಜತೆಗೆ, ಹಲವಾರು ತಂಡಗಳಾಗಿ ಸಾಗುವವರು ಅಲ್ಲಲ್ಲಿ ಅಂಗಡಿ ತೆರೆದಿರುವವವರ ಮನವೊಲಿಸುವ ಕೆಲಸ ಮಾಡಲಿದ್ದಾರೆ. ಆದರೆ, ಬಂದ್ ಶಾಂತಿಯುತವಾಗಿರುವಂತೆ ನೋಡಿಕೊಳ್ಳಲಾಗುವುದೆಂದರು.
ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಮುಖಂಡರಾದ ತಿಪ್ಪಣ್ಣ, ಡಿ.ನಾಗೇಂದ್ರಕುಮಾರ್, ರಫತ್ ಖಾನ್, ದೇವನೂರು ಪುಟ್ಟನಂಜಯ್ಯ ಇದ್ದರು.