ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆ ಖಂಡಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಎಪಿಎಂಸಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಸಮಾನತೆ, ಶೋಷಣೆ, ಮೂಢನಂಬಿಕೆ, ಪ್ರಭುತ್ವ, ಧರ್ಮಾಂಧತೆ ಸುಳಿಯಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದ ಭಾರತವನ್ನು ಸ್ವಾತಂತ್ರ್ಯ, ಸಮಾನತೆ, ಮತ್ತು ಸಹೋದರತೆಯ ಬುನಾದಿಯೊಂದಿಗೆ ಪ್ರಜಾಪ್ರಭುತ್ವದ ನೆಲೆಯಾಗಿಸಿ ವಿಶ್ವದ ಮುಂದೆ ತಲೆ ಎತ್ತಿ ನಿಲ್ಲುವಂತಹ ಸಂವಿಧಾನ ನೀಡಿದ್ದು ಅಂಬೇಡ್ಕರ್. ಆದರೆ, ಇತ್ತೀಚೆಗೆ ಸಂಸತ್ ಕಲಾಪದ ಸಂದರ್ಭದಲ್ಲಿ ಕೇಂದ್ರ ಸಚಿವ ಅಮಿತ್ ಷಾ, ಅಂಬೇಡ್ಕರ್ ಕುರಿತು ಕೇವಲವಾಗಿ ಮಾತನಾಡಿರುವುದು ಖಂಡನೀಯ. ಇಂತಹ ಹೇಳಿಕೆಗಳು ಹೊಸದೇನಲ್ಲ. ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ದಿನದಿಂದಲೂ ಪ್ರಜಾಪ್ರಭುತ್ವ ವಿರೋಧಿಗಳು, ವರ್ಣಾಶ್ರಮದ ಅಸಮಾನತೆ ಒಪ್ಪಿಕೊಂಡಿದ್ದ ಕೆಲವು ಮನುವಾದದ ಮನಸ್ಥಿತಿಯುಳ್ಳವರು ಸಂವಿಧಾನದ ಜಾರಿಯ ವಿರುದ್ಧ ಅಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದರು.
ಗಾಂಧಿಯ ಕಾಲಿಗೆ ನಮಸ್ಕರಿಸಿ ಎದೆಗೆ ಗುಂಡಿಟ್ಟು ಕೊಂದ ಗೋಡ್ಸೆ ಸಂತತಿ ದೇಶವಾಳುತ್ತಿದೆ. ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸಿ ಸಂವಿಧಾನದ ಮೂಲ ಆಶಯಗಳನ್ನು ನಾಶ ಮಾಡಲು ಹೊಂಚು ಹಾಕುತ್ತಿದೆ. ಅದರ ಸಂತತಿಗಳು ದೇಶದ ವಿವಿಧ ಭಾಗಗಳಲ್ಲಿ ಇಂದು ತಲೆಯೆತ್ತಿ, ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವಿರುದ್ಧ ಧ್ವನಿ ಎತ್ತುವುದಲ್ಲದೆ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿವೆ. ಇಂತಹ ವಿಷಜಂತುಗಳ ಬಗ್ಗೆ ಇಂದು ದೇಶದ ಪ್ರಜಾಪ್ರಭುತ್ವವಾದಿಗಳು, ಪ್ರತಿಯೊಬ್ಬರೂ ವಿಷ ಜಂತುಗಳ ಸರ್ವನಾಶಕ್ಕೆ ಸಿದ್ಧರಾಗಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಬಗ್ಗೆ ಕಾಳಜಿ ಇದ್ದರೆ ಕೂಡಲೇ ತಮ್ಮ ಸಚಿವ ಸಂಪುಟದಿಂದ ಗೃಹ ಸಚಿವ ಅಮಿತ್ ಷಾ ಸಂಪುಟದಿಂದ ವಜಾ ಮಾಡಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಸಂಘಟನಾ ಸಂಚಾಲಕ ಸೋಮಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ವಾಟಾಳ್ ನಾಗರಾಜ್, ಬೊಮ್ಮೇನಹಳ್ಳಿ ಕುಮಾರ್, ದೇವರಸನಹಳ್ಳಿ ಬಸವರಾಜ್, ಮಹದೇವಮ್ಮ ಕಟ್ಟೆಮಳಲವಾಡಿ, ಧಮ್ಮ ಅಶೋಕ್, ಕುಮಾರ್ ಕರಡಿಪುರ, ಸಿದ್ದರಾಜು ಶಂಕರಪುರ, ನಾರಾಯಣಸ್ವಾಮಿ ಇತರರು ಇದ್ದರು.