ನ್ಯೂಸ್

ಅಮರಶಿಲ್ಪಿ ಜಕಣಾಚಾರಿ ಜಯಂತಿ

ಹುಣಸೂರು: ಅಮರಶಿಲ್ಪಿ ಜಕಣಾಚಾರಿ ಜಯಂತಿಯ ದಿನ ನಿರ್ದಿಷ್ಟ ಭಾವಚಿತ್ರ ಬಳಸಲು ಸರ್ಕಾರ ಘೋಷಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಮನವಿ ಮಾಡಿದರು.


ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 900ವರ್ಷಗಳ ಹಿಂದೆ ಇಡೀ ವಿಶ್ವವೇ ಬೆರಗಾಗುವಂತೆ ಕಲ್ಲನ್ನು ಹೂವಾಗಿ ಅರಳಿಸಿದ ಅಮರಶಿಲ್ಪಿ ಜಕಣಾಚಾರಿ, ಬೇಲೂರು ಹಳೇಬೀಡು ದೇವಾಲಯಗಳಿಗೆ ವಿಶ್ವ ಭೂಪಟದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಕೊಟ್ಟಿದ್ದಾರೆ. ಆದರೆ ಅವರ ಜಯಂತಿ ಸಂದರ್ಭ ಬಳಸುವ ಭಾವಚಿತ್ರದಲ್ಲಿ ಏಕರೂಪತೆ ಇಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.


ಆಧುನಿಕತೆಯೊಂದಿಗೆ ಕೌಶಲ ಉಳಿಸಿಕೊಳ್ಳಿ:
ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಕುಲಕಸುಬು ಅವಲಂಬಿತರಿಗೆ ನುಂಗಲಾರದ ತುತ್ತಾಗಿದೆ. ಮೊಬೈಲ್‌ನಲ್ಲಿ ಕೇಳುವ ಪ್ರಶ್ನೆಗಳಿಗೆ ಮೊಬೈಲ್ ಸುಲಭವಾಗಿ ಉತ್ತರಿಸುತ್ತಿದೆ. ಹಾಗಾಗಿ ಉಳಿ, ಸಾಣೆ ಹಿಡಿದು ಚಿತ್ರಬಿಡಿಸುವ, ಕಲ್ಲನ್ನು ಕೆತ್ತುವ ಅವಕಾಶ ತಪ್ಪುತ್ತಿದೆ. ಆದರೆ ವಿಶ್ವಕರ್ಮ ಸಮುದಾಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ಕೌಶಲ ಕಣ್ಮರೆಯಾಗದಂತೆ ಕುಲಕಸುಬನ್ನು ಮುಂದುವರಿಸಿಕೊಂಡು ಹೋಗಬೇಕೆಂದರು.


ವಿಶ್ವಕರ್ಮ ಸಮಾಜದ ಮುಖಂಡರಾದ ಕೃಷ್ಣಾಚಾರಿ, ಕೆ.ಎನ್.ಕುಮಾರ್, ತಾಲೂಕು ಕಾಯಕಸಮಾಜದ ಅಧ್ಯಕ್ಷ ಹೊನ್ನಪ್ಪ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎಸ್.ಜಯರಾಂ, ರಾಚಪ್ಪ, ಸುಬ್ಬರಾವ್ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.