ಪಿರಿಯಾಪಟ್ಟಣ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯು ಚುನಾವಣಾ ವೆಚ್ಚವಾಗಿ 40 ಲಕ್ಷ ರೂ.ವರೆಗೂ ಖರ್ಚು ಮಾಡಬಹುದಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಚುನಾವಣೆಗೆ ಸಂಬಂಧಿಸಿದಂತೆ ಸ್ಥಿರ ಕಣ್ಗಾವಲು ತಂಡ(ಎಸ್‌ಎಸ್‌ಟಿ), ಕ್ಷಿಪ್ರ ಕ್ರಿಯಾ ತಂಡ(ಎಫ್‌ಎಸ್‌ಟಿ) ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ನಡೆದ ಚುನಾವಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚುನಾವಣಾ ಸಮಯದಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 50 ಸಾವಿರ ರೂ.ಗಳನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ. ಅದರ ಹೊರತಾಗಿ ದಾಖಲೆ ರಹಿತವಾಗಿ ಕೊಂಡೊಯ್ಯುವ ಹೆಚ್ಚಿನ ಮೊತ್ತದ ಹಣವನ್ನು ವಶಪಡಿಸಿಕೊಳ್ಳಬೇಕು. ವಶಪಡಿಸಿಕೊಂಡ 50 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗಿನ ಹಣವನ್ನು ಜಿಲ್ಲಾ ಮಟ್ಟದ ಕ್ಯಾಶ್ ರಿಲೀಸ್ ಸಮಿತಿಗೆ ಕಳುಹಿಸಬೇಕು ಎಂದರು.
ದಾಖಲೆ ರಹಿತವಾದ 10 ಲಕ್ಷ ರೂ. ಮೀರಿದ ಹಣದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನೀಡಬೇಕು. ಚುನಾವಣೆ ನಿಯೋಜಿತ ತಂಡಗಳು ಸಮನ್ವಯತೆಯಿಂದ ಚುನಾವಣೆ ಯಶಸ್ವಿಗೊಳಿಸಬೇಕು. ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಚುನಾವಣೆ ನಿಯಮಗಳನ್ನು ಚೆನ್ನಾಗಿ ಅರಿತು ಒಂದು ತಂಡದ ರೂಪದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಮತದಾನ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ತಂಗುದಾಣ, ಕಾಯ್ದಿರಿಸಿದ ಕೊಠಡಿ ವ್ಯವಸ್ಥೆ ಮಾಡುವುದು ಹಾಗೂ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತರು ಹಾಗೂ ಮಾದರಿ ನೀತಿ ಸಂಹಿತೆ ಜಿಲ್ಲಾ ನೋಡಲ್ ಅಧಿಕಾರಿ ದೇವರಾಜ್ ಮಾತನಾಡಿ, ಮತಗಟ್ಟೆ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿಯನ್ನು ಸಂಗ್ರಹಿಸಿ ಮತದಾರರ ಜಾಗೃತಿ ತಂಡ ರಚಿಸಿಕೊಂಡರೆ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.
ಚುನಾವಣಾ ಪ್ರಚಾರಕ್ಕಾಗಿ ಅನುಮತಿ ಪಡೆದಿರುವ ವಾಹನಗಳ ಬಳಕೆಗಷ್ಟೇ ಅವಕಾಶ ನೀಡಬೇಕು. ಅನುಮತಿಯಿಲ್ಲದೆ ವಾಹನಗಳನ್ನು ಬಳಸಿದರೆ ಕೇಸ್ ದಾಖಲಿಸಿ ವಾಹನಗಳನ್ನು ವಶಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿರಿಯಾಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೆ.ವಿ.ಶ್ರೀಧರ್ ಚೆಕ್‌ಪೋಸ್ಟ್‌ಗಳಲ್ಲಿ ಹಣ ಅಥವಾ ಇತರ ವಸ್ತುಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಪಂಚನಾಮೆ ಮಾಡುವ ಕ್ರಮ ಹಾಗೂ ಎಫ್‌ಐಆರ್ ದಾಖಲಿಸುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ತಹಸೀಲ್ದಾರ್ ಕುಂಇ ಅಹಮದ್, ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಕೃಷ್ಣಕುಮಾರ್, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಎ.ಎನ್. ಸುಬ್ರಹ್ಮಣ್ಯ ಶರ್ಮ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.