ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಸಿಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮಾತನಾಡಿದರು. ಶಾಸಕ ಕೆ.ಮಹದೇವ್, ಪಿ.ಎಂ.ಪ್ರಸನ್ನ, ಎಚ್.ಡಿ.ರಾಜೇಂದ್ರ ಇತರರು ಇದ್ದರು. 
ನ್ಯೂಸ್

ಅಭಿವೃದ್ಧಿಯಲ್ಲಿ ಮಾದರಿ ಕಾರ್ಯ

ಪಿರಿಯಾಪಟ್ಟಣ: ತಾಲೂಕಿನಲ್ಲಿ ಶಾಸಕ ಕೆ.ಮಹದೇವ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮಾದರಿಯಾಗಿವೆ ಎಂದು ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ಸಿಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ತಿಳಿಸಿದರು.
ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅತಿಹೆಚ್ಚು ರೈತರ ಸಾಲ ಮನ್ನಾ ಮಾಡಿದರು. ಪಿರಿಯಾಪಟ್ಟಣದಲ್ಲಿ 77 ಕೋಟಿ ರೂ.ಗಳ ರೈತರ ಸಾಲ ಮನ್ನಾ ಆಗಿದೆ ಎಂದರು. ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಶಾಸಕ ಕೆ.ಮಹದೇವ್ ತಾಲೂಕನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಶ್ಲಾಘಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ, ತಾಲೂಕಿನಲ್ಲಿ ಕೃಷಿ ಬ್ಯಾಂಕ್ ತೆರೆದು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುವ ಕೆಲಸವಾಗಬೇಕು. ಈ ಬಗ್ಗೆ ಜಿ.ಟಿ.ದೇವೇಗೌಡರಿಗೆ ಮನವಿ ಮಾಡಲಾಗಿದೆ ಎಂದರು.
ಕಟ್ಟಡ ನಿರ್ಮಾಣ ಗುತ್ತಿಗೆದಾರ ಪಿ.ಕೆ.ವಿಜಯ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ, ನಿರ್ದೇಶಕ ಎಚ್.ಡಿ.ರಾಜೇಂದ್ರ, ಪಂಚವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ರಾಜು, ಉಪಾಧ್ಯಕ್ಷೆ ಮಂಗಳಮ್ಮ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಕೆ.ಹರೀಶ್, ಗ್ರಾ.ಪಂ. ಅಧ್ಯಕ್ಷ ಗೋವಿಂದರಾಜು, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಗಿರೀಶ್, ಮುಖಂಡರಾದ ಸತೀಶ್ ಇತರರು ಇದ್ದರು.