ಯಳಂದೂರು: ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಕೊಡಿಸಲು ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಅಲ್ಲದೆ ಇಲ್ಲಿ ನಿವೇಶನಗಳನ್ನು ಹಂಚಲು ಜಾಗವನ್ನು ಗುರುತಿಸುವ ಕೆಲಸವನ್ನು ಮಾಡಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಯಳಂದೂರು ಪಟ್ಟಣ ಚಿಕ್ಕದಾಗಿದೆ. ಇಲ್ಲಿಗೆ ಆದಾಯದ ಮೂಲಗಳು ಬೇಕಿವೆ, ನೀರು, ಕಂದಾಯ ಹಾಗೂ ಕಟ್ಟಡದ ಮಳಿಗೆಗಳಿಂದ ಬರುವ ಬಾಡಿಗೆಯನ್ನು ಸಮಯಕ್ಕೆ ಸರಿಯಾಗಿ ಕಟ್ಟುವಂತೆ ಇಲ್ಲಿನ ಸಿಬ್ಬಂದಿ ಹಾಗೂ ಸದಸ್ಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಾಗ ಗುರುತಿಸಿ: ಪಟ್ಟಣದಲ್ಲಿ ಪತ್ರಕರ್ತರ ಭವನ ನಿರ್ಮಾಣ, ಶಿಕ್ಷಕರ ಭವನಕ್ಕೆ ಹಾಗೂ ಕುಡಿಯುವ ನೀರಿನ ಒವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗವನ್ನು ಗುರುತಿಸಬೇಕು. ಈಗ ಬೈಪಾಸ್ ರಸ್ತೆ ಆಗಿದ್ದು ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಜಾಗವೂ ಸೇರಿದಂತೆ ಇತರೆಡೆ ಇರುವ ಜಾಗವನ್ನು ಗುರುತಿಸಿ ಮುಂದಿನ ಸಭೆಯೊಳೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
ಸಿಎಂ ಭರವಸೆ ನೀಡಿದ್ದಾರೆ: ಇದರೊಂದಿಗೆ ಆಶ್ರಯ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ನೀಡಲಾಗುವ ನಿವೇಶನಗಳಿಗೆ ಖಾಲಿ ಜಾಗವನ್ನು ಗುರುತಿಸಿ. ಅಲ್ಲದೆ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸುವ ಕೆಲಸವೂ ಆಗಲಿ. ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗ 100 ಬೆಡ್‌ನ ಆಸ್ಪತ್ರೆಯನ್ನು ನಿರ್ಮಾಣ ಮಾಡಲು 30.50 ಕೋಟಿ ರೂ. ಅವಶ್ಯಕತೆ ಇದ್ದು ಮುಂದಿನ ಬಾರಿ ಬಜೆಟ್‌ನಲ್ಲಿ ಅನುದಾನ ನೀಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಸಾಧ್ಯವಾದಲ್ಲಿ ಇಲ್ಲೇ ನೀರಿನ ಟ್ಯಾಂಕ್ ನಿರ್ಮಿಸಲು ಯೋಜನೆ ರೂಪಿಸಿ ಎಂದು ಹೇಳಿದರು.
ಅವ್ಯವಹಾರ ತನಿಖೆಗೆ ಸೂಚನೆ: ಇದೇ ಸಂದರ್ಭದಲ್ಲಿ 2ನೇ ವಾರ್ಡ್ ಸದಸ್ಯ ವೈ.ಜಿ.ರಂಗನಾಥ ಮಾತನಾಡಿ, ಕಳೆದ ಜನವರಿ ತಿಂಗಳಲ್ಲಿ ನಡೆದ ಡೇ, ನಲ್ಮ್ ಯೋಜನೆಯಡಿ ಹಮ್ಮಿಕೊಂಡಿದ್ದ ಕಾನೂನು ಅರಿವು, ನೆರವು ಕಾರ್ಯಕ್ರಮದಲ್ಲಿ ಇಲ್ಲಿನ ಸಿಬ್ಬಂದಿಯೊಬ್ಬರು ಅವ್ಯವಹಾರ ನಡೆಸಿದ್ದಾರೆ. ನಾನು ಮಾಹಿತಿ ಕೇಳಿದು,್ದ ಸಂಬಂಧಿಸಿದ ಮಾಹಿತಿಯಲ್ಲಿ ಯಳಂದೂರು ಪಟ್ಟಣ ಪಂಚಾಯಿತಿಯಲ್ಲಿ ಹನೂರು, ಗುಂಡ್ಲುಪೇಟೆ ಪಂಚಾಯಿತಿಯ ಹೆಸರುಗಳು ಪ್ರಸ್ತಾಪವಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿದರು.
ಇದರ ಬಗ್ಗೆ ಸಂಬಂಧಿಸಿದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಶಾಸಕರು, ಈ ಕಾರ್ಯಕ್ರಮದಲ್ಲಿ ನಡೆದಿರುವ ಅವ್ಯವಹಾರವನ್ನು ಮುಖ್ಯಾಧಿಕಾರಿ ತನಿಖೆ ನಡೆಸಬೇಕು ಎಂದು ಸೂಚನೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಹಳೇ ಶೌಚಗೃಹದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ, ಪಟ್ಟಣದ ಸಂತೆಮಾಳದಲ್ಲಿರುವ ವಾಣಿಜ್ಯ ಅಂಗಡಿ ಮಳಿಗೆಗಳ ದುರಸ್ತಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಮಗೆ ಅನುದಾನದ ಕೊರತೆ ಇದ್ದು ಇದನ್ನು ಕೊಡಿಸಿಕೊಡಬೇಕೆಂದು ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ಶಾಸಕರು ಅನುದಾನ ಕೊಡಿಸುವ ಭರವಸೆ ನೀಡಿದರು.
ಅಲ್ಲದೆ, ನೀರಿನ ಕಂದಾಯ ವಾರ್ಷಿಕ 30 ಲಕ್ಷ ರೂ. ಇದ್ದು ಕೇವಲ 11 ಲಕ್ಷ ರೂ. ಪಾವತಿ ಆಗುತ್ತಿದೆ. ಅಲ್ಲದೆ ಜನನ ವರದಿ ಮಾಹೆಯಾನ ತರಿಸಿಕೊಳ್ಳಬೇಕು. ಪಟ್ಟಣಕ್ಕೆ ಆದಾಯ ತರುವ ಮೂಲಗಳ ಕಡೆ ಹೆಚ್ಚಿನ ಗಮನ ನೀಡಬೇಕು. ಈಗ ಇರುವ ನ್ಯೂನತೆಗಳು ಮುಂದಿನ ಸಭೆಯಲ್ಲಿ ಮರುಕಳಿಸಬಾರದು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಶಾಸಕ ಎ.ಆರ್.ಕೃಷ್ಣಮೂರ್ತಿ ಎಚ್ಚರಿಸಿದರು.
ಪಪಂ ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಕೆ.ಮಲ್ಲಯ್ಯ, ಮಂಜು, ಬಿ.ರವಿ, ಪ್ರಭಾವತಿ, ಸುಶೀಲಾ, ಲಕ್ಷ್ಮೀ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ಜಯಪ್ರಕಾಶ್, ಜೆಇ ನಾಗೇಂದ್ರ, ಲಕ್ಷ್ಮೀ, ಜಯಲಕ್ಷ್ಮಿ, ರೇಖಾ, ಮಲ್ಲಿಕಾರ್ಜುನ, ಪರಶಿವಮೂರ್ತಿ ಇತರರಿದ್ದರು.