ಕೆ.ಆರ್.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ ಹಳೇ ಮೈಸೂರು ಭಾಗ ಸ್ವಾತಂತ್ರೃ ಪೂರ್ವದಲ್ಲೇ ಅಭಿವೃದ್ಧಿ ಕಂಡಿದ್ದು, ಈಗಿನ ಚುನಾಯಿತ ಸದಸ್ಯರು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಅಂಗವಾಗಿ ಪಟ್ಟಣದ ಗರುಡಗಂಭ ವೃತ್ತದಲ್ಲಿರುವ ಅರಸು ಅವರ ಪುತ್ಥಳಿಗೆ ತಾಲೂಕು ಆಡಳಿತದ ವತಿಯಿಂದ ಬುಧವಾರ ಮಾರ್ಲಾಪಣೆ ಮಾಡಿ ನಂತರ ಆಯೋಜಿಸಿದ್ದ ವೇದಿಕೆ ಸಮಾರಂಭದಲ್ಲಿ ಮಾತನಾಡಿದರು. ಒಡೆಯರ್ ಕುಟುಂಬ ರಾಜಮನೆತನಕ್ಕೆ ಮಾತ್ರ ಸೀಮಿತಗೊಳ್ಳದೆ ಗ್ರಾಮೀಣ ಜನತೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿತು. ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನೂರು ವರ್ಷಗಳ ಹಿಂದೆಯೇ ಚಾಮರಾಜ ಎಡ ಮತ್ತು ಬಲ ದಂಡೆ ನಾಲೆ ನಿರ್ಮಾಣ ಮಾಡಿದ್ದರಿಂದ ಕೆ.ಆರ್.ನಗರ ಕ್ಷೇತ್ರ ಭತ್ತದ ಕಣಜ ಎಂದು ಪ್ರಸಿದ್ದಿ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್, ಎಸ್‌ಬಿಎಂ ಬ್ಯಾಂಕ್ ಆರಂಭಿಸುವ ಮೂಲಕ ನಾಗರಿಕರ ಆರ್ಥಿಕ ಚಟುವಟಿಕೆಗೆ ಅನುಕೂಲ ಕಲ್ಪಿಸಿದರು. ಇದರ ಜತೆಗೆ ಸಾಕ್ಷರತಾ ಆಂದೋಲನ ಆರಂಭಿಸಿ ಮೈಸೂರು ರಾಜ್ಯದ ಜನತೆ ಶಿಕ್ಷಿತರಾಗಲು ಕಾರಣರಾದರು. ಇಂತಹವರನ್ನು ಸ್ಮರಿಸಬೇಕಾದದ್ದು ನಮೆಲ್ಲರ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಕಚೇರಿ ವತಿಯಿಂದ ನೀಡಲಾದ ವಿವಿಧ ಮಾಸಾಶನದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಡಿ.ರವಿಶಂಕರ್ ವಿತರಿಸಿದರು. ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಬಿ.ಎಸ್.ತೋಂಟದಾರ್ಯ, ಸೌಮ್ಯಾ ಲೋಕೇಶ್, ಮುಖ್ಯಾಧಿಕಾರಿ ಸುಧಾರಾಣಿ, ಸಮಾಜ ಕಲ್ಯಾಣಾಧಿಕಾರಿ ಎಸ್.ಎಂ.ಅಶೋಕ್ ಕುಮಾರ್, ಸಿಡಿಪಿಒ ಪೂರ್ಣಿಮಾ, ಸಿಪಿಐ ರೇವಣ್ಣ, ಪಿಎಸ್‌ಐ ಸುಶ್ಮಾ, ಗ್ರಾಪಂ ಮಾಜಿ ಸದಸ್ಯ ಎಚ್.ಎಂ.ಮಂಜು, ಮುಖಂಡರಾದ ಎಚ್.ಪಿ.ಪ್ರಶಾಂತ್, ಚೀರ್ನಹಳ್ಳಿ ಶಿವಣ್ಣ ಇತರರು ಹಾಜರಿದ್ದರು.