ಕೋಲಾರ : ರಾಜ್ಯದಲ್ಲಿ ಕರೊನಾ ಮೂರನೇ ಅಲೆ ಬಾಗಿಲಿಗೆ ಬಂದು ನಿಂತಿದ್ದು, ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 11.76 ಲಕ್ಷ ಜನರ ಪೈಕಿ 5.25 ಲಕ್ಷಕ್ಕೂ ಅಧಿಕ ಮಂದಿಗೆ ವ್ಯಾಕ್ಸಿನ್ ಮೊದಲ ಡೋಸ್ ಸಿಕ್ಕಿಲ್ಲ, ಮೊದಲ ಡೋಸ್ ಪಡೆದವರು ಎರಡನೇ ಡೋಸ್‌ಗೆ ಕಾಯುತ್ತಿದ್ದಾರೆ. ಎರಡನೇ ಅಲೆಯ ಅಬ್ಬರ ತಗ್ಗಿದ್ದರೂ ಕೇರಳ, ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ರಾಜ್ಯ ರಾಜಧಾನಿಯ ಅಪಾರ್ಟ್‌ಮೆಂಟ್ ಇನ್ನಿತರ ಪ್ರದೇಶಗಳಲ್ಲೂ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿದೆ. ಬೆಂಗಳೂರಿನ ಮಗ್ಗುಲಿನಲ್ಲಿರುವ ಕೋಲಾರದಿಂದ ದಿನನಿತ್ಯ ಸಾವಿರಾರು ಮಂದಿ ಕೆಲಸ ಕಾರ್ಯಗಳಿಗೆ ರಾಜಧಾನಿಗೆ ಹೋಗಿ ಬರುವುದರಿಂದ ಜಿಲ್ಲೆಯಲ್ಲೂ ಆತಂಕ ಇದ್ದೇ ಇದೆ. 11.76 ಲಕ್ಷ ಗುರಿ: 18 ವರ್ಷ ಮೇಲ್ಪಟ್ಟ 7,56,190 ಮಂದಿ, 45ರಿಂದ 59 ವರ್ಷದೊಳಗಿನ 2,47,970 ಮಂದಿ ಹಾಗೂ 60 ವರ್ಷ ಮೇಲ್ಪಟ್ಟ 1,71,908 ಮಂದಿಗೆ ಲಸಿಕೆ ನೀಡುವ ಗುರಿ ಇದೆ. ಸಾಧನೆ ಎಷ್ಟು: ಜಿಲ್ಲೆಯಲ್ಲಿ ಗುರುವಾರದವರೆಗಿನ ಮಾಹಿತಿಯನ್ವಯ 45 ವರ್ಷ ಮೇಲ್ಪಟ್ಟವರಲ್ಲಿ 3,01,442 ಮಂದಿ ಮೊದಲ ಡೋಸ್ ಪಡೆದರೆ ಇವರಲ್ಲಿ ಎರಡನೇ ಡೋಸ್ ಪೂರ್ಣಗೊಳಿಸಿದವರ ಸಂಖ್ಯೆ1,13,613 ಎರಡನೇ ಹಂತದಲ್ಲಿ ಆರಂಭಿಸಿದ 18 ರಿಂದ 44 ವರ್ಷದೊಳಗಿನವರಲ್ಲಿ 1,93,795 ಮಂದಿ ಮೊದಲ ಡೋಸ್ ಪಡೆದಿದ್ದರೆ, ಎರಡನೇ ಡೋಸ್ ಪೂರ್ಣಗೊಳಿಸಿದವರ ಸಂಖ್ಯೆ ಕೇವಲ 11,254 ಮಂದಿ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 14,677 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದರೆ 11,428 ಮಂದಿ ಎರಡನೇ ಡೋಸ್ ಪೂರೈಸಿದ್ದಾರೆ. ಮೊದಲ ಡೋಸ್ ಪಡೆದ 17260 ಮುಂಚೂಣಿ ಕಾರ್ಯಕರ್ತರಲ್ಲಿ 9520 ಮಂದಿ ಎರಡನೇ ಲಸಿಕೆ ಪಡೆದುಕೊಂಡಿದ್ದಾರೆ. ಆ.2ರಂದು 6918 ಮಂದಿಗೆ ಮೊದಲ ಡೋಸ್, 2718 ಮಂದಿಗೆ ಎರಡನೇ ಡೋಸ್ ಸಿಕ್ಕರೆ, 3ರಂದು 3019 ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದಾರೆ. 1351 ಮಂದಿಗೆ 2ನೇ ಡೋಸ್ ಸಿಕ್ಕಿದೆ. ಆ. 4ರಂದು 3458 ಮಂದಿ ಮೊದಲ ಡೋಸ್ ಪಡೆದರೆ 1385 ಮಂದಿಗೆ ಎರಡನೇ ಡೋಸ್ ಸಿಕ್ಕಿದೆ. ಗುರುವಾರ 3458 ಮಂದಿ ಮೊದಲ ಡೋಸ್ ಪಡೆದುಕೊಂಡರೆ 1358 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ 6,50,163 ಮಂದಿ ಮೊದಲ ಡೋಸ್ ಪಡೆದಿದ್ದು, 1,45,815 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಆದರೆ ಇನ್ನೂ 5,25,905 ಮಂದಿ ಲಸಿಕೆಯ ಮೊದಲ ಡೋಸ್ ಕೂಡ ಪಡೆಯಲು ಸಾಧ್ಯವಾಗಿಲ್ಲ. ಆರಂಭದ ದಿನಗಳಲ್ಲಿ ಲಸಿಕಾಕರಣದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದರೂ ಪ್ರಸ್ತುತ ಲಸಿಕೆ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಲಸಿಕಾ ಕಾರ್ಯ ನಡೆಯುತ್ತಿಲ್ಲ. ಲಸಿಕಾ ಕೇಂದ್ರಗಳಲ್ಲಿ ಆಗಾಗ ನೋ ಸ್ಟಾಕ್ ಬೋರ್ಡ್ ಸರ್ವೇ ಸಾಮಾನ್ಯವಾಗಿದೆ. ಬರುವ ಅಲ್ಪ ಪ್ರಮಾಣದ ಲಸಿಕೆ ಕೆಲವು ಸಾವಿರ ಮಂದಿಗಷ್ಟೇ ಸಿಗುತ್ತದೆ. ಕಳೆದ ಮೂರು ದಿನಗಳಿಂದ ನಿತ್ಯ ಮೊದಲ ಡೋಸ್ 4500ರ ಗಡಿ ದಾಟುತ್ತಿಲ್ಲ. ಈಗಾಗಲೆ ಅನೇಕರು ಮೊದಲ ಡೋಸ್ ಪಡೆದು 84 ದಿನ ದಾಟಿದ ಅನೇಕರಿಗೆ ಇನ್ನೂ ಎರಡನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ಲಸಿಕೆ ಪಡೆದ ನಂತರ ಸೋಂಕು ಬಂದರೂ ಗಂಭೀರ ಹಾನಿ ಉಂಟಾಗದು. ಮೂರನೇ ಅಲೆ ಭೀತಿ ಆರಂಭವಾಗಿದೆ, ಸೋಂಕಿನ ಪ್ರಕರಣ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಲಸಿಕೆಗಾಗಿ ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಈಗಿನ ವೇಗದಲ್ಲಿ ಲಸಿಕಾಕರಣ ನಡೆದರೆ ಡೇಂಜರ್ ಝೋನ್‌ನಲ್ಲಿ ಇರುವ 5.25 ಲಕ್ಷ ಮಂದಿ ಮೊದಲ ಡೋಸ್ ಲಸಿಕೆ ಪಡೆಯುವ ವೇಳೆಗೆ ಮೂರನೇ ಅಲೆ ಅಪ್ಪಳಿಸಬಹುದು. ಲಸಿಕೆ ಪಡೆಯದವರು ಬೇಗ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಸಿಗುವ ನಿರೀಕ್ಷೆ ಇರುವುದರಿಂದ ಲಸಿಕೆ ವಿತರಣೆ ಕಾರ್ಯ ಚುರುಕುಗೊಳ್ಳಬಹುದು.
ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್ ಸೇರಿ ಒಟ್ಟಾರೆ 7.60 ಲಕ್ಷ ಮಂದಿಗೆ ನೀಡಲಾಗಿದೆ. ಇದರಲ್ಲಿ ಸುಮಾರು ಒಂದೂವರೆ ಲಕ್ಷ ಮಂದಿಗೆ ಎರಡನೇ ಅವಧಿಯ ಲಸಿಕೆ ಕಾರ್ಯವೂ ಮುಗಿದಿದೆ. ಜಿಲ್ಲೆಗೆ ಲಸಿಕೆ ಬೇಡಿಕೆ ಹೆಚ್ಚಿದೆ. ಪ್ರತಿ ಹಂತದಲ್ಲಿ 6,000ರಿಂದ 7000 ಲಸಿಕೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಲಸಿಕೆ ಸಿಗುವ ನಿರೀಕ್ಷೆ ಇದೆ. ಡಾ.ಜಗದೀಶ್ ಡಿಎಚ್‌ಒ, ಕೋಲಾರ