ಬೆಂಗಳೂರು: ಬಹು ಕೋಟಿ ರೂಪಾಯಿಗಳ ಅಬಕಾರಿ ಹಫ್ತಾ ವಸೂಲಿ ಹೊರಬಿದ್ದಿದೆ. ಮದ್ಯದ ವ್ಯಾಪಾರಿಗಳ ಸಂಘವೇ ದರ ಪಟ್ಟಿಯನ್ನು ಬಹಿರಂಗಪಡಿಸಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಹಿಸಿರುವುದು ಏಕೆ ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲ ತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಆಧಾರರಹಿತವಾಗಿ 40% ಸರ್ಕಾರವೆಂದು ಆರೋಪಗಳ ಲೇಬಲ್ ಮಾಡಿದ್ದರು. ಈಗ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಗಂಭೀರವಾದ ಆಪಾದನೆ ಕೇಳಿಬಂದರೂ ಚಕಾರವೆತ್ತುತ್ತಿಲ್ಲ ಎಂದು ಹೀಗಳೆದಿದ್ದಾರೆ.
ಮುಡಾ ನಿವೇಶನಗಳ ಹಂಚಿಕೆ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಿ ನಂಬರ್ ಒನ್, ಭ್ರಷ್ಟಾಚಾರದ ಗಂಭೀರ ಆರೋಪಗಳ ಹೊರತಾಗಿಯೂ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಇಂಥ ಮುಖ್ಯಮಂತ್ರಿಯಿಂದ ಹೊಣೆಗಾರಿಕೆ ನಿರೀಕ್ಷಿಸುವಂತಿಲ್ಲ ಎನ್ನುವುದು ತಿಳಿದಿದೆ ಎಂದು ತಿವಿದಿದ್ದಾರೆ.
ರಾಜ್ಯದ 700 ಕೋಟಿ ರೂ.ಗಳ ಮದ್ಯದ ಹಗರಣವೀಗ ಬಯಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಡಿಯಲ್ಲಿ ಭ್ರಷ್ಟಾಚಾರವು ಹಗರಣವಲ್ಲ. ಇದು, ಕಾಂಗ್ರೆಸ್ ಪಕ್ಷದ ಜೀವನಶೈಲಿಯಾಗಿದೆ. 17 ತಿಂಗಳ ಭ್ರಷ್ಟಾಚಾರದ ಪುಟದಲ್ಲಿ ಹೊಸ ಅಧ್ಯಾಯವಿದು. ಸಚಿವ ಆರ್.ಬಿ.ತಿಮ್ಮಾಪುರ ಅವರ ಸುಲಿಗೆ ದಂಧೆಯನ್ನು ಕರ್ನಾಟಕ ಮದ್ಯ ವ್ಯಾಪಾರಿಗಳ ಸಂಘ ಬಹಿರಂಗಪಡಿಸಿದೆ.
ತಿಮ್ಮಾಪುರ ವಿರುದ್ಧ ವಾರ್ಷಿಕ 180 ಕೋಟಿ ರೂ.ಗಳ ಹ್ತಾ ವಸೂಲಿ ಆರೋಪವು ಗಂಭೀರವಾಗಿ ಪರಿಗಣಿಸುವುದು ಅನುಮಾನ. ಇದೊಂದು ಪೇ ಟು ಪ್ಲೇ ಸ್ಕೀಮ್ ಭಾಗವಾಗಿರಬಹುದು ಅಥವಾ ‘ಚುನಾವಣೆ ಉದ್ದೇಶ’ ಎನ್ನುವ ಉದಾತತ್ತೆಯೂ ಇರಬಹುದು !. ಇಲ್ಲವೇ ಪಾಲುದಾರಿಕೆಯಿರುವ ಸಾಧ್ಯತೆಯೂ ಇದೆ.
ಅಬಕಾರಿ ಇಲಾಖೆಯಲ್ಲಿ ಪ್ರತಿಯೊಂದಕ್ಕೂ ಲಂಚದ ದರ ಪಟ್ಟಿ ನಿಗದಿಯಾಗಿದೆ. ಸಿಎಲ್7 ಬಾರ್ ಸನ್ನದು ಪಡೆಯಲು 30 ರಿಂದ 70 ಲಕ್ಷ ರೂ.ಗಳಿದ್ದು, ನಿಯಮ ಬಾಹಿರವಾಗಿ ಒಂದು ಸಾವಿರ ಸನ್ನದು ನೀಡಲಾಗಿದೆ. ಇದೊಂದು ್ರಾಂಚೈಸಿ ಭ್ರಷ್ಟಾಚಾರದ ಕಾರ್ಯಾಚರಣೆ, ವಾರ್ಷಿಕ 700 ಕೋಟಿ ರೂ. ವಸೂಲಿಯು ದಿಗ್ಭ್ರಮೆಗೊಳಿಸುವ ಉದ್ಯಮ ರೀತಿಯ ದಂಧೆಯಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುತ್ತಿಲ್ಲ ಬದಲಿಗೆ ನಿಭಾಯಿಸಲಾಗುತ್ತಿದೆ. ಹಗರಣಗಳು ಹೊರ ಬಿದ್ದಾಗ ದಿವ್ಯಮೌನವಹಿಸಲಾಗುತ್ತದೆ. ‘ಭ್ರಷ್ಟಾಚಾರದ ಬ್ರ್ಯಾಂಡ್’ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕದ ಜನರು ಶಾಪಗ್ರಸ್ತರಾಗಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಚಾಟಿ ಬೀಸಿದ್ದಾರೆ.