ನ್ಯೂಸ್

ಅಬಕಾರಿ ಸುತ್ತೋಲೆ ಹಿಂಪಡೆಯಲು ಒತ್ತಾಯ

ಸಿದ್ದಾಪುರ: ಸಮಾರಂಭಗಳಿಗೆ ಮದ್ಯ ಬಳಕೆ ಬಗ್ಗೆ ಅಬಕಾರಿ ಇಲಾಖೆಯ ಉಪ ಆಯುಕ್ತರು ಹೊರಡಿಸಿರುವ ಸುತ್ತೋಲೆಯು ಕೊಡಗಿನ ಜನತೆಗೆ ಆತಂಕ ತಂದಿದ್ದು, ಸುತ್ತೋಲೆ ಹಿಂಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ ಒತ್ತಾಯಿಸಿದ್ದಾರೆ.

ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಕೊಡಗಿನ ಜನತೆ ಮದ್ಯ ಉಪಯೋಗಿಸುವುದು ಸಂಪ್ರದಾಯ. ಅನಾದಿ ಕಾಲದಿಂದಲೂ ಕೊಡಗಿನ ಜನತೆ ಎಲ್ಲ ಸಮಾರಂಭಗಳಿಗೂ ಕೂಡ ಗುರು ಹಿರಿಯರನ್ನು ಪ್ರಾರ್ಥಿಸಿ ಶುಭ ಕಾರ್ಯ ನಡೆಸುತ್ತಾ ಬಂದಿದ್ದು, ಹೊರ ಜಿಲ್ಲೆಯಿಂದ ಕೊಡಗಿಗೆ ಮದ್ಯ ಸಾಗಣೆಯಾಗುತ್ತಿದೆ ಎಂಬುದನ್ನು ಮುಂದಿಟ್ಟುಕೊಂಡು ನೀಡಿರುವ ಆದೇಶ ಆತಂಕಕಾರಿ. ಹೊರ ಜಿಲ್ಲೆಗಳಿಂದ ಸಾಗಣೆಯಾಗುವ ಮದ್ಯವನ್ನು ಇಲಾಖೆ ಸಿಬ್ಬಂದಿ ಗಡಿಭಾಗದ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ನಿಯಂತ್ರಿಸಲಿ ಎಂದು ತಿಳಿಸಿದ್ದಾರೆ. ಸ್ಥಿತಿವಂತರು ಹಾಗೂ ಕಡುಬಡವರೂ ಪದ್ಧತಿ ಪರಂಪರೆ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.