ಬೀಳಗಿ ಸಮಿಪದ ಕೋರ್ತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣನವರ ೧೫೦ ನೇ ಜಯಂತಿ ಕಾರ್ಯಕ್ರಮ ರಾಜ್ಯ ನೀರಾವರಿ ಇಲಾಖೆ ಮಹಾ ವ್ಯವಸ್ಥಾಪಕ ರಾಜೇಶ ಅಮ್ಮಿನಬಾವಿ ಉದ್ಘಾಟಿಸಿದರು. ಶಾಸಕ ಜೆ.ಟಿ.ಪಾಟೀಲ, ಅಲೆಮಾರಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ, ಏಕಲವ್ಯ ಇದ್ದರು. 
ನ್ಯೂಸ್

ಅಪ್ಪಣ್ಣನವರ ಸ್ಮಾರಕ ಅಭಿವೃದ್ಧಿಗೆ ಬದ್ಧ

ಬಾಗಲಕೋಟೆ: ಶಹನಾಯಿ ನುಡಿಸುವ ಮೂಲಕ ಸಂಗೀತ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡಿದ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣನವರ ಕೊಡುಗೆ ಅಪಾರವಾಗಿದೆ. ಅವರನ್ನು ಜೀವಂತವಾಗಿ ಇಡುವ ಕೆಲಸ ಮಾಡುವುದಾಗಿ ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಭರವಸೆ ನೀಡಿದರು.

ಬೀಳಗಿ ಸಮೀಪದ ಕೋರ್ತಿ ಸಮುದಾಯ ಭವನದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೀಳಗಿ ಸನಾದಿ ಅಪ್ಪಣ್ಣ ಕಲಾಕಾರರ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣನವರ ೧೫೦ ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರಂ ಸಮುದಾಯದ ಜನರು ಒಂದಾಗಿರಬೇಕು. ಒಗ್ಗಟ್ಟು ಇದ್ದಾಗ ಮಾತ್ರ ಏನನ್ನಾದರು ಪಡೆಯಲು ಸಾಧ್ಯ. ಸನಾದಿ ಅಪ್ಪಣ್ಣ ಕಲಾಕಾರರ ಸಂಘದ ಅಧ್ಯಕ್ಷ ಬಸವರಾಜ ಭಜಂತ್ರಿಯವರು ಸನಾದಿ ಅಪ್ಪಣ್ಣನವರ ಜನ್ಮದಿನ ಆಚರಣೆ ಮಾಡುತ್ತಿರುವುದು ಮೆಚ್ಚುವಂತಹದ್ದು. ಇದಕ್ಕೆ ಸಮಾಜದವರು ಕೈ ಜೋಡಿಸಬೇಕು ಎಂದರು.

ಈಗಾಗಲೇ ನಾನು ಸನಾದಿ ಅಪ್ಪಣ್ಣನವರ ಸಮಾದಿ ಅಭಿವೃದ್ಧಿಗೆ ೨೫ ಲಕ್ಷ ಅನುದಾನ ನೀಡುವುದಾಗಿ ಹೇಳಿದೆ. ಆದರೆ ಕೊರಂ ಸಮಾಜ ಬಾಂಧವರು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಬಂದರೆ ಎಲ್ಲವನ್ನು ಪಡೆಯಲು ಸಾಧ್ಯವಾಗಲಿದೆ. ಸನಾದಿ ಅಪ್ಪಣ್ಣನವರ ಸ್ಮಾರಕ ಅಭಿವೃದ್ಧಿಗಾಗಿ ೮ ಗುಂಟೆ ಜಾಗೆ ನೀಡುವುದಾಗಿ ಭರವಸೆ ನೀಡಿದರು.

ರಾಜ್ಯ ನೀರಾವರಿ ಇಲಾಖೆ ಮಹಾ ವ್ಯವಸ್ಥಾಪಕ ರಾಜೇಶ ಅಮ್ಮಿನಬಾವಿ ಮಾತನಾಡಿ, ಕೊರಂ ಸಮುದಾಯ ಜನರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕು. ಇದಕ್ಕೆ ಶಿಕ್ಷಣ ಬಹು ಮುಖ್ಯ. ಸಮಾಜದ ಮುಖಂಡರು ತಮ್ಮ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಬೇಕು. ಯುವ ಜನತೆ ಸಮಾಜದ ಅಭಿವೃದ್ದಿಗೆ ಮುಂದಾಗಬೇಕು ಎಂದು ತಿಳಿಸಿದರು.

ರಾಜ್ಯ ಎಸ್ಸಿ,ಎಸ್ಟಿ ಅಲೆಮಾರಿ ನಿಗಮದ ಕಾರ್ಯದರ್ಶಿ ಏಕಲವ್ಯ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ನಮ್ಮ ಹಕ್ಕನ್ನು ಪಡೆಯಲು ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಾಜ ಅಭಿವೃದ್ಧಿಗೆ ಮುಂದಾಗಿದ್ದಾರೆ. ಸ್ಥಳೀಯ ಶಾಸಕ ಜೆ.ಟಿ.ಪಾಟೀಲ ಅವರು ಸಮಾಜ ಯಾವುದೇ ಕೆಲಸ ಇರಲ್ಲಿ ಅವರು ಮುಂದೆ ನಿಂತು ಮಾಡಿಕೊಡಲಿದ್ದಾರೆ ಎಂದು ಹೇಳಿದರು.

ಕೊರಂ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಎಂ.ಭಜAತ್ರಿ, ಕೊರಂ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ ಮಾತನಾಡಿದರು. ತಹಸೀಲ್ದಾರ ವಿನೋದ ಹತ್ತಳ್ಳಿ, ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ಉಪಾಧ್ಯಕ್ಷ ಕಿಶೋರಿ ಬೂದನೂರ, ರಾಮಜಿ ಭಜಂತ್ರಿ, ಕೊರ್ತಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಮಾದರ, ಮಹಾದೇವ ಭಜಂತ್ರಿ, ವಿ.ಜಿ.ವರೇಡಿಗಾರ, ಕೋಲ್ಲಾರ ಪಪಂ ಸದಸ್ಯ ಬಾಬು ಭಜಂತ್ರಿ ಇದ್ದರು.