ಶೃಂಗೇರಿ ಪೊಲೀಸ್ ಠಾಣೆಯಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮನಸ್ವಿಗೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಮೋಹನ್‌ಕುಮಾರ್ ಬಹುಮಾನ ವಿತರಿಸಿದರು. ಎ.ಎಸ್.ನಯನ, ಶಂಕರನಾರಾಯಣ, ಕಾವ್ಯಾ, ಐಶ್ವರ್ಯ ಇದ್ದರು. 
ನ್ಯೂಸ್

ಅಪರಾಧ ನಿಯಂತ್ರಣಕ್ಕೆ ಜನರು ಸ್ಪಂದಿಸಲಿ

ಶೃಂಗೇರಿ: ಅಪರಾಧ ನಿಯಂತ್ರಣಕ್ಕೆ ಸಹಕಾರಿಯಾಗಲು ಹಾಗೂ ಜನಸಾಮಾನ್ಯರಲ್ಲಿ ಸುರಕ್ಷಿತಭಾವ ಮೂಡಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮನೆಮನೆಗೆ ಪೊಲೀಸ್ ಅಭಿಯಾನ ತಾತ್ಕಾಲಿಕ ಅಭಿಯಾನ ಆಗಿರದೆ ನಿರಂತರವಾಗಿ ನಡೆಯುವ ಪ್ರಕ್ರಿಯೆ ಎಂದು ಸಹಾಯಕ ಉಪನಿರೀಕ್ಷಕ ಸಿ.ಆರ್.ಮೋಹನ್‌ಕುಮಾರ್ ತಿಳಿಸಿದರು.

ಶನಿವಾರ ಶೃಂಗೇರಿ ಪೊಲೀಸ್ ಠಾಣೆಯಿಂದ ಪಟ್ಟಣದ ಜ್ಞಾನಭಾರತಿ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಹುತಾತ್ಮರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಮನೆಮನೆಗೆ ಪೊಲೀಸ್ ವಿಷಯವಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಭಾವಾನಾತ್ಮಕ ಸಂಬಂಧ ಗಟ್ಟಿಗೊಳಿಸಬೇಕಿದೆ. ಹಾಗಾಗಿ ಮನೆಮನೆಗೆ ಪೊಲೀಸ್ ಜನಸ್ನೇಹಿಯತ್ತ ಎಂಬ ಧ್ಯೇಯದೊಂದಿಗೆ ಇಲಾಖೆ ಹಲವಾರು ಕಾರ್ಯಕ್ರಮ ನಡೆಸುತ್ತಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಇಲಾಖೆ ಉದ್ದೇಶ ಎಂದರು.

ಜ್ಞಾನಭಾರತಿ ವಿದ್ಯಾಕೇಂದ್ರ ಟ್ರಸ್ಟ್ ಅಧ್ಯಕ್ಷ ಎ.ಎಸ್.ನಯನ ಮಾತನಾಡಿ, ಪೊಲೀಸ್ ಇಲಾಖೆ ಸಾರ್ವಜನಿಕ ಸಂಪರ್ಕ ಬಲಪಡಿಸಿಕೊಂಡರೆ ಮಾತ್ರ ಅಪರಾಧ ನಿಯಂತ್ರಣ ಸಾಧ್ಯ. ಜನಸಾಮಾನ್ಯರ ಅಹವಾಲುಗಳನ್ನು ಸ್ವೀಕರಿಸಿ ಅದರ ಕುರಿತು ಮಾಹಿತಿ ಸಂಗ್ರಹಿಸಿ ಸುರಕ್ಷತೆ ಭಾವ ಮೂಡಿಸುವಲ್ಲಿ ಇಲಾಖೆ ಪರಿಶ್ರಮಿಸಿದಾಗ ಮಾತ್ರ ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸ ಮೂಡಲು ಸಾಧ್ಯ ಎಂದರು.

ಪ್ರಬಂಧ ಸ್ಪರ್ಧೆಯಲ್ಲಿ ಮನಸ್ವಿ (ಪ್ರ), ಸಾದ್ವಿನಿ (ದ್ವಿ), ಸುಹಾನಿ ಎಸ್.ರಾವ್.(ತೃ) ಬಹುಮಾನ ಪಡೆದರು. ಚಿತ್ರಕಲೆ ಸ್ಪರ್ಧೆಯಲ್ಲಿ ಸಾದ್ವಿನಿ (ಪ್ರ), ಪ್ರಥಮ್ (ದ್ವಿ) ಹಾಗೂ ಧನೇಶ್ ಪಾಟೀಲ್ (ತೃ) ಬಹುಮಾನ ಗಳಿಸಿದರು.

ವಿದ್ಯಾಕೇಂದ್ರದ ಮುಖ್ಯಶಿಕ್ಷಕ ಶಂಕರನಾರಾಯಣ್, ಸಹಶಿಕ್ಷಕಿಯರಾದ ಕಾವ್ಯಾ, ಐಶ್ವರ್ಯ ಪಿ. ಶೆಟ್ಟಿ, ಪೊಲೀಸ್ ಸಿಬ್ಬಂದಿ ಮಂಜುನಾಥ್, ಗೃಹರಕ್ಷಕದಳದ ಸುಂದರೇಶ್ ಇತರರಿದ್ದರು.