ಬೆಳಗಾವಿ: ನಗರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಮತ್ತೆ ಉದ್ಧಟತನ ತೋರಿದ್ದು, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಎದುರೇ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಪುಂಡಾಟಿಕೆ ಮೆರೆದಿದ್ದಾರೆ. ಎಡಿಸಿ ಅವರನ್ನು ಮರಾಠಿಯಲ್ಲಿ ಮಾತನಾಡುವಂತೆ ಗದರಿದ್ದಲ್ಲದೆ ಮರಾಠಿ ಭಾಷೆ ಮಾತನಾಡಲು ಬಾರದಿದ್ದರೆ ಇಲ್ಲಿ ಯಾಕೆ ಬಂದಿದ್ದೀಯ? ಎಂದು ಏಕವಚನದಲ್ಲೇ ನಿಂದಿಸಿದ್ದಾರೆ.
ಸರ್ಕಾರಿ ದಾಖಲೆ ಮರಾಠಿ ಭಾಷೆಯಲ್ಲಿ ನೀಡುವಂತೆ ಹಾಗೂ ನಗರದಲ್ಲಿ ನಾಮಫಲಕಗಳನ್ನು ಮರಾಠಿ ಭಾಷೆಯಲ್ಲಿ ಅಳವಡಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ವೇಳೆ ಎಂಇಎಸ್ ಕಾರ್ಯಕರ್ತರು ದುಂಡಾವರ್ತನೆ ತೋರಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಈ ವೇಳೆ ಪೋಲಿಸರು ಹಾಗೂ ಎಂಇಎಸ್ ಕಾರ್ಯಕರ್ತರ ಮಧ್ಯೆ ವಾಗ್ವಾದವೂ ನಡೆಯಿತು.
ಧರ್ಮವೀರ ಸಂಭಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಕಾರ್ಯಕರ್ತರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು. ಬೆಳಗಾವಿ ಮಹಾನಗರ ಪಾಲಿಕೆ ಎದುರಿರುವ ಕನ್ನಡ ಧ್ಚಜ ತೆರವು ಮಾಡಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಾಮಫಲಕಗಳನ್ನು ತ್ರಿಭಾಷಾ ಸೂತ್ರದಂತೆ ಅಳವಡಿಸಬೇಕು.
ಶೇ.15 ಭಾಷಾ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲಿ ಅವರ ಭಾಷೆಗೂ ಸ್ಥಳೀಯರ ಮಾತೃಭಾಷೆಯಷ್ಟೇ ಪ್ರಾಮುಖ್ಯತೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಾಠಿ ನಾಮಫಲಕಗಳನ್ನು ಹಾಗೂ ಮರಾಠಿ ಭಾಷೆಯನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.