ನ್ಯೂಸ್

ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಸಾವು

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಗೊರಹಳ್ಳಿ ಗ್ರಾಮದ ಚೆನ್ನಪ್ಪನಕೆರೆ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಕ್ಯಾಂಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಮೀಪದ ಹಿಟ್ಟನೆ ಹೆಬ್ಬಾಗಿಲು ಗ್ರಾಮದ ಶಂಕರ್ (26), ಶೇಖರ್ (22) ಮೃತರು. ಶಂಕರ್ ಮತ್ತು ಶೇಖರ್ ಕೆಲಸ ನಿಮಿತ್ತ ರಾಮನಾಥಪುರಕ್ಕೆ ತೆರಳಿ ವಾಪಸ್ ಪಿರಿಯಾಪಟ್ಟಣಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಪಿರಿಯಾಪಟ್ಟಣ ಕಡೆಯಿಂದ ರಾಮನಾಥಪುರ ಕಡೆಗೆ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನ ಹಿಂಬದಿ ಸವಾರ ಶೇಖರ್ ಹಾರಿ ರಸ್ತೆಯ ಮೇಲೆ ಬಿದ್ದಿದ್ದು ಗಂಭೀರ ಗಾಯಗೊಂಡು ಅಲ್ಲಿಯೇ ಮೃತಪಟ್ಟ. ಬೈಕ್ ಸವಾರ ಶಂಕರ್‌ಗೆ ತಲೆ ಪೂರ್ಣ ಜಜ್ಜಿ ಹೋಗಿ ರುಂಡ ಬೇರ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ಸ್ಥಳದಲ್ಲಿಯೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿ ಚಿಕ್ಕ ಅಣ್ಣಯ್ಯ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಅಜಯ್‌ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.