ನ್ಯೂಸ್

ಅಪಘಾತದಲ್ಲಿ ಪತ್ನಿ ಸಾವು, ಪತಿ ಗಾಯ

ಪಿರಿಯಾಪಟ್ಟಣ: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟಿದ್ದು, ಆಕೆಯ ಪತಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಪಿರಿಯಾಪಟ್ಟಣದ ಶಾಂತಮ್ಮ(35) ಮೃತರು. ಶಿವಣ್ಣ ಗಾಯಗೊಂಡವರು. ದಂಪತಿ ರಾಜಾಪುರದಲ್ಲಿರುವ ತಮ್ಮ ಜಮೀನಿನಲ್ಲಿ ಹಸುಗಳನ್ನು ಸಾಕಿದ್ದರು. ಹಾಲು ಕರೆಯುವ ಸಲುವಾಗಿ ಗುರುವಾರ ಮುಂಜಾನೆ ಗೋಣಿಕೊಪ್ಪ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಪಟ್ಟಣದ ಮಹದೇಶ್ವರ ದೇವಾಲಯದ ತಿರುವಿನಲ್ಲಿ ಅಪರಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಾಯಗೊಂಡರು.

ಸ್ಥಳೀಯರು ಕೂಡಲೇ ಚಿಕಿತ್ಸೆಗಾಗಿ ಇಬ್ಬರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲು ಆಂಬೂಲೆನ್ಸ್‌ಗೆ ಹತ್ತಿಸುವ ಸಂದರ್ಭ ಶಾಂತಮ್ಮ ಮೃತಪಟ್ಟರು. ಶಿವಣ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಡಿಕ್ಕಿಯಾಗಿ ಯುವಕ ಮೃತ: ಪಿರಿಯಾಪಟ್ಟಣದ ಬಿ.ಎಂ. ರಸ್ತೆಯ ಗಾಂಧಿನಗರ ಸರ್ಕಲ್ ಬಳಿ ಕೆಪಿಟಿಸಿಎಲ್ ಇಲಾಖೆ ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪಿರಿಯಾಪಟ್ಟಣ ಟೌನ್‌ನ ಮೇದರ ಬ್ಲಾಕ್‌ನ ಪುಟ್ಟಯ್ಯ ಎಂಬುವರ ಪುತ್ರ ರಂಜಿತ್ (21) ಮೃತ. ರಂಜಿತ್ ಗುರುವಾರ ಬೆಳಗ್ಗೆ ಪಿರಿಯಾಪಟ್ಟಣ ಟೌನ್‌ನಿಂದ ಬಿ.ಎಂ.ರಸ್ತೆಯ ಮಾರ್ಗವಾಗಿ ಗಾಂಧಿನಗರ ಬಡಾವಣೆಯಲ್ಲಿರುವ ಮನೆಗೆ ತೆರಳುತ್ತಿದ್ದಾಗ ಗಾಂಧಿನಗರದ ತಿರುವಿನಲ್ಲಿರುವ ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯ ಎದುರು ಹಿಂಬದಿಯಿಂದ ಬರುತ್ತಿದ್ದ ಕೆಪಿಟಿಸಿಎಲ್ ಕಚೇರಿಯ ವಾಹನ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ರಂಜಿತ್‌ನನ್ನು ಚಿಕಿತ್ಸೆಗಾಗಿ ಮೈಸೂರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.