ರಾಮನಗರ : ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಗಿರೀಶ್ ಅವರು ಠಾಣಾವಾರು ತಂಡ ರಚಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಸ್ತೆ ಸುರಾಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸ್ತೆಗಳಲ್ಲಿ ಇರುವ ಹಂಪ್, ತಿರುವುಗಳು ವಾಹನ ಚಾಲಕರಿಗೆ ಗೋಚರವಾಗುವುದಿಲ್ಲ. ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಜಂಟಿಯಾಗಿ ಪರಿಶೀಲಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಅಪಘಾತಗಳನ್ನು ತಡೆಯಬಹುದು ಎಂದರು.
ರಸ್ತೆ ಅಪಘಾತ ತಡೆಗಟ್ಟಲು ರಚಿಸಲಾಗಿರುವ ತಂಡದಲ್ಲಿ ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಅವಶ್ಯಕವಿದ್ದ ಕಡೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಇರುತ್ತಾರೆ.
ತಂಡವು ವಾರಕೊಮ್ಮೆ ಸಭೆ ನಡೆಸಬೇಕು. ಉಪ ಪೊಲೀಸ್ ಅಧೀಕ್ಷಕರು ತಮ್ಮ ವ್ಯಾಪ್ತಿಗೆ ಬರುವ ತಂಡಗಳ ಜತೆ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಅಪಘಾತದಲ್ಲಿ ಮೃತ ಪಡುವ ಪ್ರಕರಣಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ. ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಏಕೆ ವಹಿಸಲಿಲ್ಲ ಎಂದು ಪ್ರಶ್ನಿಸುತ್ತದೆ ಎಂದರು.
ಇಲಾಖೆಗಳಿಂದ ರಸ್ತೆ ಕಾಮಗಾರಿಗಳು ನಡೆಯುತ್ತಿರುತ್ತವೆ. ಕಾಮಗಾರಿ ನಡೆಯುವ ರಸ್ತೆಗಳಿಗೆ ಬ್ಯಾರಿಕೇಡ್, ಸೂಚನಾ ಫಲಕ ಅಳವಡಿಕೆ ಹಾಗೂ ಪರ್ಯಾಯ ರಸ್ತೆ ವ್ಯವಸ್ಥೆ ಮಾಡುವಾಗ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ. ಈ ಕಾರ್ಯದಲ್ಲಿ ಇಲಾಖೆಗಳ ಸಮನ್ವಯ ಮುಖ್ಯ ಎಂದರು.
ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವುದು, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕರಾದ ರಮೇಶ್, ಮೋಹನ್ ಕುಮಾರ್, ಓಂ ಪ್ರಕಾಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಜಯ್ ಗೋಪಾಲ್, ಗಂಗಾಧರಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ತಳ್ಳುಗಾಡಿಗಳನ್ನು ತೆರವುಗೊಳಿಸಿ : ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ತಳ್ಳುವ ಗಾಡಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಸಾರ್ವಜನಿಕರು ಆಹಾರ ಸೇವನೆ ಮಾಡಲು ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಾರೆ. ಜನಸಂದಣಿ ಉಂಟು ಮಾಡುತ್ತಾರೆ ಇದರಿಂದ ವಾಹನ ಚಾಲನೆಗೆ ತೊಂದರೆಯಾಗಿ ಅಪಘಾತ ಉಂಟಾಗುವ ಸಂಭವವಿರುತ್ತದೆ. ಇವುಗಳನ್ನು ಪರಿಶೀಲಿಸಿ ತೆರವುಗೊಳಿಸಿ ಎಂದು ಗಿರೀಶ್ ತಿಳಿಸಿದರು.