ಮೈಸೂರು: ಅನ್ಯಾಯ, ಅಸಮಾನತೆಯ ವಿರುದ್ಧ ಹೋರಾಡಿ, ಸಮಾಜದಲ್ಲಿ ಭದ್ರವಾಗಿ ಬೇರೂರಲು ಹೆಣ್ಣಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ಎಂಬುದು ಅವಶ್ಯಕ ಅಸ್ತ್ರಗಳು ಎಂದು ವಿಮರ್ಶಕ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ತಿಳಿಸಿದರು.
ನಗರದ ಹೊಸಮಠದಲ್ಲಿರುವ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಹೆಣ್ಣು ಮಕ್ಕಳ ಜೀವನ ಬಹುತೇಕ ಅತಂತ್ರ ಸ್ಥಿತಿಯಲ್ಲಿದ್ದು, ಸ್ವತಂತ್ರವಾಗಿ ಒಡಾಡಲು ಭಯಪಡುವಂತಾಗಿದೆ. ಆದರೆ ಹೆಣ್ಣು ಯಾವುದರಲ್ಲೂ ಹೀನಳಲ್ಲ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬಲ್ಲ ಸಾಮರ್ಥ್ಯ ಉಳ್ಳವಳು ಎಂಬುದು ಇಡೀ ಸಮಾಜಕ್ಕೆ ತಿಳಿಯಬೇಕೆಂದರೆ, ಸವಾಲುಗಳೊಂದಿಗೆ ಮುನ್ನುಗ್ಗಬೇಕು ಎಂದರು.