ನ್ಯೂಸ್

ಅನ್ಯಮನಸ್ಕರತ್ತ ಕಮಲಪಡೆ ಹೈಅಲರ್ಟ್

ಬೆಂಗಳೂರು: ಅನ್ಯಮನಸ್ಕರ ಮನೋಕ್ಲೇಶ ತಿಳಿಗೊಳಿಸಿ, ಪಕ್ಷದಲ್ಲೇ ಉಳಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿ ರಾಜ್ಯ ನಾಯಕರು ಹೈಅಲರ್ಟ್ ಆಗಿದ್ದಾರೆ. ಆಪರೇಷನ್ ಹಸ್ತ ಕಾರ್ಯಾಚರಣೆ ತೀವ್ರತೆ, ಪ್ರತಿತಂತ್ರ ಹೂಡುವ ಕುರಿತು ಬಿಜೆಪಿ ರಾಜ್ಯ ಕೋರ್ ಕಮಿಟಿ ಗಂಭೀರ ಚಿಂತನೆ ನಡೆಸಿದೆ.

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷದ ರಾಜ್ಯ ಕಮಿಟಿ ಸೋಮವಾರ ಮೊದಲ ಬಾರಿಗೆ ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ಸೇರಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಪ್ರಾರಂಭವಾಗಿದ್ದು, ಕಾಂಗ್ರೆಸ್ ಕಡೆ ವಾಲಿದ್ದಾರೆ ಎನ್ನಲಾದ ಕೆಲವರನ್ನು ಪಕ್ಷದಲ್ಲೇ ಉಳಿಸಿಕೊಂಡು ಲೋಕಸಭೆ ಚುನಾವಣಾ ಪೂರ್ವ ಚಟುವಟಿಕೆಗಳ ಜವಾಬ್ದಾರಿ ಒಪ್ಪಿಸಲು ಚರ್ಚಿಸಲಿದೆ.

ಕಾವೇರಿ ವಿಷಯದಲ್ಲಿ ಸರ್ಕಾರದ ನಡೆ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ಯೋಚಿಸಿದೆ. ಆದರೆ ಬುಧವಾರ ಸರ್ವಪಕ್ಷ ಸಭೆ ಕರೆದಿರುವ ಹಿನ್ನಲೆಯಲ್ಲಿ ಅದೇ ದಿನ ಚಳವಳಿ ಹೂಡಬೇಕೋ ಅಥವಾ ನಂತರವೋ ಎಂಬ ಜಿಜ್ಞಾಸೆಗೆ ಈ ಸಭೆಯಲ್ಲಿ ಉತ್ತರ ಕಂಡುಕೊಳ್ಳುವ ಸಾಧ್ಯತೆಗಳಿವೆ.

ಸರ್ಕಾರದ ನಡೆ, ನೀತಿ-ನಿರ್ಧಾರ, ಭ್ರಷ್ಟಾಚಾರ, ದೂರು ಕೊಟ್ಟವರ ವಿರುದ್ಧವೇ ತನಿಖೆ, ದ್ವೇಷದ ರಾಜಕಾರಣ, ಲೋಕಸಭಾ ಚುನಾವಣೆ ತಯಾರಿ, ಸಂಘಟನಾ ಪ್ರವಾಸ, ರಾಜ್ಯ ಹಾಗೂ ಕ್ಷೇತ್ರಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿಗಳ ರಚನೆ ಇತ್ಯಾದಿ ವಿಷಯಗಳು ಸಭೆಯಲ್ಲಿ ಚರ್ಚೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಚಿವರಾದ ಸಿ.ಟಿ. ರವಿ, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಡಾ|| ಸಿ.ಎನ್. ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಪಾಲ್ಗೊಂಡಿದ್ದಾರೆ.