ನ್ಯೂಸ್

ಅನ್ನಭಾಗ್ಯ ಸಹಾಯಧನ ಬಿಡುಗಡೆಗೆ ಆಗ್ರಹ

ಚಿತ್ರದುರ್ಗ: ರಾಜ್ಯದ ಪಡಿತರ ವಿತರಕರಿಗೆ 2025ರ ಮಾರ್ಚ್, ಏಪ್ರಿಲ್, ಮೇ ತಿಂಗಳ ಅನ್ನಭಾಗ್ಯದ ಸಹಾಯಧನ ಅಥವಾ ಲಾಭಾಂಶ ಬಿಡುಗಡೆಗೊಳಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೃಷ್ಣ ಡಿ. ನಾಯ್ಕ್ ಸರ್ಕಾರಕ್ಕೆ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತತ 6 ವರ್ಷಗಳಿಂದ ಇ-ಕೆವೈಸಿ ಸಂಬಂಧ ಕಾರ್ಯನಿರ್ವಹಿಸಿರುವ ಹಣ ಈವರೆಗೂ ಬಿಡುಗಡೆಯಾಗಿಲ್ಲ. ಈ ಕುರಿತು ಕ್ರಮವಹಿಸಿ ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ ಸತತ 45 ವರ್ಷಗಳಿಂದಲೂ ಆಹಾರ ಇಲಾಖೆಯಡಿ ಅನೇಕರು ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 20,488 ಪಡಿತರ ವಿತರಕರು ಸರ್ಕಾರ ರೂಪಿಸುವ ಯೋಜನೆಗಳಿಗೆ ಅನುಗುಣವಾಗಿ, ಅದರ ಯಶಸ್ಸಿಗೂ ಪ್ರಮುಖವಾಗಿ ಕಾರಣೀಭೂತರಾಗಿದ್ದಾರೆ. ಆಗಾಗಿ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಪಡಿತರ ವಿತರಕರಿಗೆ ಮಾಸಿಕ ಸರ್ಕಾರದಿಂದ ಬರುವ ಸಹಾಯಧನ ಅಥವಾ ಲಾಭಾಂಶ ನೀಡದಿರುವ ಕಾರಣ ಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಹೀಗಾಗಿ ಬಿಡುಗಡೆಗೆ ಮುಂದಾಗಬೇಕು. ಸರ್ಕಾರ ಪ್ರಿಂಟರ್ ಸೇರಿ ಅಗತ್ಯ ಉಪಕರಣ, ಯಂತ್ರೋಪಕರಣ ಒದಗಿಸಬೇಕು ಎಂದು ಆಗ್ರಹಿಸಿದರು.

ಪಡಿತರ ಚೀಟಿದಾರರಿಗೆ 10 ಕೆ.ಜಿ ಅಕ್ಕಿ ಜೊತೆಗೆ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಇತ್ಯಾದಿ ಪದಾರ್ಥಗಳು ವಿತರಿಸಬೇಕು. ಸರ್ಕಾರವೀಗ ನಮಗೆ ಕೇವಲ 150 ರೂ. ಕಮಿಷನ್ ನೀಡುತ್ತಿದೆ. ಇದು ಯಾವುದಕ್ಕೂ ಸಾಲದು. ಆದ್ದರಿಂದ 250 ರೂ.ಗೆ ಹೆಚ್ಚಿಸಬೇಕು. ಇದರಿಂದ ಹೊರೆ ಕಡಿಮೆಯಾಗಲಿದೆ ಎಂದರು.

ಸರ್ಕಾರ ಹೊಸದಾಗಿ ಪಡಿತರ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಇದರಿಂದ ಹಳಬರಿಗೆ ಲಾಭಾಂಶ ಕಡಿಮೆಯಾಗಿ ತೊಂದರೆಯಾಗಲಿದೆ. ಯಾವುದೇ ರೀತಿಯ ಭದ್ರತೆ ಇಲ್ಲದೆ, ಕಾರ್ಯನಿರ್ವಹಿಸುತ್ತಿರುವ ಪಡಿತರ ವಿತರಕರ ಕ್ಷೇಮ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದು ಕೋರಿದರು.

ಸಂಘದ ಗೌರವಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ಪದಾಧಿಕಾರಿಗಳಾದ ಕೆ.ಎಸ್. ಪ್ರಕಾಶ್, ಡಿ.ಜಿ. ಶಿವಾನಂದಪ್ಪ, ಎಂ.ಕೆ. ರಾಮಚಂದ್ರ, ರೇಣುಕಮ್ಮ, ಕೆ.ಎಸ್. ಸಿದ್ಧಬಸಪ್ಪ, ಭೀಮಪ್ಪ, ಹನುಮಂತಪ್ಪ ಇತರರಿದ್ದರು.