ಬಾಗೇಪಲ್ಲಿ: ಪುರಸಭೆಗೆ ಆರ್ಥಿಕ ವರದಾನವಾಗಿರುವ ಸುಮಾರು 10 ಕೋಟಿ ರೂ ಬೆಲೆ ಬಾಳುವ ಹಲವು ವಾಣಿಜ್ಯ ಮಳಿಗೆಗಳು ಸಾರ್ವಜನಿಕರ ಶೌಛಗೃಹ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಟಾಗಿದ್ದರೂ, ಪುರಸಭೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಗಾಢ ನಿದ್ರೆಯಲ್ಲಿರುವುದು ಶೋಚನೀಯವಾಗಿದೆ.
ಪಟ್ಟಣದ ಗೂಳೂರು ರಸ್ತೆ ಹಾಗೂ ಡಿವಿಜಿ ಮುಖ್ಯರಸ್ತೆಯ ಹಳೇ ಕೆನರಾಬ್ಯಾಂಕ್ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣ ಮಳಿಗೆಗಳು, ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅಂಗಡಿ ಮಳಿಗೆಗಳ ನಿರ್ಮಾಣಕ್ಕೆ ಪುರಸಭೆಯಿಂದ ಕೋಟಿಗಟ್ಟಲೇ ಅನುದಾನ ವೆಚ್ಚ ಮಾಡಲಾಗಿದೆ. ಅಂಗಡಿ ಮಳಿಗೆಗಳು ನಿರ್ಮಾಣಗೊಂಡು ಸುಮಾರು 5 ರಿಂದ 6 ವರ್ಷ ಕಳೆದರು ಬಾಡಿಗೆಗೆ ನೀಡುವಲ್ಲಿ ಪುರಸಭೆ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ.
ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಕ್ಕೆ ಸೂಚನೆ: 2018 ಅ.30 ರಂದು ಅಂದಿನ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಬಾಗೇಪಲ್ಲಿಗೆ ಭೇಟಿ ನೀಡಿ ಪುರಸಭೆ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಪರಿಶೀಲಿಸಿ ಸಾರ್ವಜನಿಕರ ಒತ್ತಾಯದಂತೆ ಪಟ್ಟಣದ ಎಸ್‌ಬಿಎಂ ರಸ್ತೆಯ ಖಾಸಗಿ ಮಾಲೀಕತ್ವ ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಪಟ್ಟಣದ ಗೂಳೂರು ರಸ್ತೆಯಲ್ಲಿ ಪುರಸಭೆಯಿಂದ ನಿರ್ಮಿಸಿರುವ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿ, ಕಚೇರಿಗೆ ಅವಶ್ಯಕವಿರುವ ಆಗತ್ಯ ಸೌಲಭ್ಯಗಳನ್ನು ಪುರಸಭೆಯಿಂದ ಕಲ್ಪಿಸಿ ಪುರಸಭೆ ಆದಾಯ ಹೆಚ್ಚಸಿಕೊಳ್ಳುವಂತೆ ಸ್ಥಳದಲ್ಲೆ ಇದ್ದ ಪುರಸಭೆ ಮುಖ್ಯಾಧಿಕಾರಿ ವಿ.ಪಂಕಜಾರೆಡ್ಡಿಗೆ ತಿಳಿಸಿದ್ದರು. ಅದರಂತೆ ಪುರಸಭೆ ಕಟ್ಟಡದಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಅಗತ್ಯಕ್ಕೆ ಅನುಗುಣವಾಗಿ ಪೀಠೋಪಕರಣ ಅಳವಡಿಸಿ ದುರಸ್ಥಿ ವ್ಯವಸ್ಥೆ ಸಹ ಮಾಡಿಕೊಡಲಾಗಿತ್ತು. ಆದರೇ 3 ವರ್ಷಗಳಾದರೂ ಕಚೇರಿ ಸ್ಥಳಾಂತರವೂ ಇಲ್ಲ, ಇತರರಿಗೆ ಬಾಡಿಗೆಗೂ ನೀಡಲಿಲ್ಲ. ಉದ್ಘಾಟನೆಗೊಂಡಿರುವ ವಾಣಿಜ್ಯ ಕಟ್ಟಡ 3 ವರ್ಷಗಳಿಂದ ಧೂಳು ಹಿಡುತ್ತಿದೆ.
ಬಾಗೇಪಲ್ಲಿ ಪಟ್ಟಣದಲ್ಲಿ ತರಕಾರಿ ವ್ಯಾಪಾರ ನಡೆಸಿಕೊಳ್ಳಲು ನಿರ್ದಿಷ್ಠ ಸ್ಥಳ ಇಲ್ಲದ ಕಾರಣ ಧೂಳು ಮಯವಾಗಿರುವ ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದೇವೆ. ವ್ಯಾಪಾರಕ್ಕೆ ಸಿದ್ದವಾಗಿರುವ ಪುರಸಭೆ ಅಂಗಡಿಗಳನ್ನು ಬಾಡಿಗೆ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಹೆಸರು ಹೇಳಲು ಇಚ್ಛಿಸಿದ ತರಕಾರಿ ವ್ಯಾಪಾರಸ್ಥ.
ಅನೈತಿಕ ಚಟುವಟಿಕೆಗಳ ತಾಣ : ಪಟ್ಟಣದ ನೇತಾಜಿ ಸರ್ಕಲ್ ಮತ್ತು ಪಿಎಲ್‌ಡಿ ಬ್ಯಾಂಕ್ ರಸ್ತೆಯಲ್ಲಿ ತರಕಾರಿ ವ್ಯಾಪರಿಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದೊಂದಿಗೆ ಪುರಸಭೆ ಅನುದಾನದಲ್ಲಿ ವರ್ಷದ ಹಿಂದೆಯೇ ತರಾಕಾರಿ ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಸ್ಥಳೀಯ ಶಾಸಕರು ಅಂಗಡಿ ಮಳಿಗೆಗಳನ್ನು ಲೋಕಾರ್ಪಣೆ ಮಾಡಿದ್ದರು. ಅದರೆ ಇದುವರೆಗೂ ಯಾರಿಗೂ ಬಾಡಿಗೆ ನೀಡದ ಕಾರಣ ಅಂಗಡಿಗಳು ನಿರುಪಯುಕ್ತವಾಗಿ ಬಿದ್ದಿವೆ. ನಿರುಪಯುಕ್ತ ಅಂಗಡಿ ಮಳಿಗೆಗಳನ್ನು ಸಾರ್ವಜನಿಕರು ದ್ವಿಚಕ್ರ ವಾಹನ ನಿಲ್ದಾಣ, ಶೌಚಗೃಹ ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದು ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಗೂಳೂರು ರಸ್ತೆಯಲ್ಲಿರುವ ಪುರಸಭೆ ಕಟ್ಟಡದಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಗೆ ಮೀಸಲಿಟ್ಟಿರುವ ಕಟ್ಟಡವನ್ನು ವಶಕ್ಕೆ ಪಡೆದುಕೊಳ್ಳುವಂತೆ ಪೌರಾಡಳಿತ ಇಲಾಖೆ ಯೋಜನಾಧಿಕಾರಿಗಳ ಮುಖಾಂತರ ಜಿಲ್ಲಾ ನೋಂದಣಾಧಿಕಾರಿಗೆ ಪತ್ರ ರವಾನಿಸಲಾಗಿದೆ. ಗುತ್ತಿಗೇದಾರರಿಗೆ ಬಿಲ್ ಆಗದ ಕಾರಣ ಅಂಗಡಿಗಳ ಹಂಚಿಕೆಗೆ ವಿಳಂಭವಾಗಿತ್ತು, ಬಿಲ್ ಆದ ತಕ್ಷಣವೇ ಲಾಟರಿ ಮೂಲಕ ಲಾನುಭವಿಗಳನ್ನು ಅಯ್ಕೆ ಮಾಡಿ ನೆಲ ಬಾಡಿಗೆ ನೀಡಲಾಗುತ್ತದೆ. ವಿ.ಪಂಕಜಾರೆಡ್ಡಿ. ಮುಖ್ಯಾಧಿಕಾರಿ ಪುರಸಭೆ ಬಾಗೇಪಲ್ಲಿ.