ಹುಣಸೂರು: ನಗರಸಭೆ ವ್ಯಾಪ್ತಿಯ ಮಂಜುನಾಥ ಬಡಾವಣೆಯಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ತಪ್ಪಿಸಲು ಮೊದಲ ಹಂತವಾಗಿ ಸಮಗ್ರ ಸರ್ವೇ ಕಾರ್ಯ ಆರಂಭಗೊಂಡಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ನಗರಸಭೆ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಕಳೆದೊಂದು ವಾರದಲ್ಲಿ ಮೂರು ಬಾರಿ ಮಂಜುನಾಥ ಬಡಾವಣೆ ನೀರಿನಿಂದ ಆವೃತವಾಗಿದೆ. ಮನೆಯೊಳಗೆ ನೀರು ನುಗ್ಗಿ ನಾಗರಿಕರು ತೊಂದರೆಗೊಳಗಾಗಿದ್ದಾರೆ. ಈ ಬಡಾವಣೆಯ ವ್ಯಾಪ್ತಿಯಲ್ಲಿ ತಲೆಯೆತ್ತಿರುವ ಅನಧಿಕೃತ ಖಾಸಗಿ ಬಡಾವಣೆಗಳಿಂದಾಗಿ ಮತ್ತು ದಾಖಲೆ ಪ್ರಮಾಣದ ಮಳೆಯಿಂದಾಗಿ ಸಮಸ್ಯೆ ಬಿಗಡಾಯಿಸಿದೆ. ಈ ಬಡಾವಣೆಯಲ್ಲಿ ರಾಜಕಾಲುವೆಯೇ ಇರಲಿಲ್ಲ. ರಾಜಕಾಲುವೆ ಮುಚ್ಚಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಂಜುನಾಥ ಬಡಾವಣೆಯ ಮೇಲ್ಭಾಗದ ವಳ್ಳಮ್ಮನಕಟ್ಟೆಯಿಂದ ಆರಂಭಗೊಂಡು ಶಾಸ್ತ್ರಿ ವಿದ್ಯಾಸಂಸ್ಥೆಯ ಹಿಂಭಾಗದಲ್ಲಿ ಲಕ್ಷ್ಮಣತೀರ್ಥ ನದಿಗೆ ಸೇರುವವರೆಗೆ 2.25 ಮೀಟರ್ ಉದ್ದದ ಈ ಭಾಗದಲ್ಲಿ ಕಾಲುವೆಗಳು ಕೆಲವೆಡೆ ಚಿಕ್ಕದಾಗಿದ್ದರೆ ಮತ್ತೆ ಕೆಲವೆಡೆ ದೊಡ್ಡದಾಗಿದೆ. ಇನ್ನೂ ಕೆಲವೆಡೆ ಅನಗತ್ಯ ತಿರುವಿನಿಂದ ಕೂಡಿದ್ದ ನೀರು ಸರಾಗವಾಗಿ ಹರಿಯಲಾಗದೇ ಪ್ರವಾಹ ಪರಿಸ್ಥಿತಿ ಏರ್ಪಡುತ್ತಿದೆ. ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿದ್ದು, ನಗರಸಭೆ ಇಂಜಿನಿಯರ್‌ಗಳು, ಸರ್ವೇ ಇಲಾಖೆ ಮತ್ತು ಕ್ಯಾಡ್ ಸ್ಟೇಷನ್ ಟೆಕ್ನಾಲಜೀಸ್ ಸಂಸ್ಥೆಯ ಸಹಯೋಗದಲ್ಲಿ ಮೊದಲ ಹಂತವಾಗಿ ಸಮಗ್ರ ಸರ್ವೇ ಕಾರ್ಯ ನಡೆಸಲು ತೀರ್ಮಾನಿಸಲಾಗಿದೆ. ಸರ್ವೇ ಕಾರ್ಯದ ವೇಳೆ ನೀರು ಸರಾಗವಾಗಿ ಹರಿಯಲು ತಡೆಯೊಡ್ಡುತ್ತಿರುವ ಸ್ಥಳಗಳ ಗುರುತಿಸುವಿಕೆ, ಒಂದೇ ಕಡೆ ನೀರು ಹರಿಯದಂತೆ ವಿಭಜಿಸುವಿಕೆ ಮುಂತಾದ ಕ್ರಮಗಳನ್ನು ಗುರುತಿಸಿಕೊಳ್ಳಲಾಗುವುದು ಎಂದರು.
3.5 ಕೋಟಿ ರೂ.ಅನುದಾನ : ನಗರೋತ್ಥಾನ 3ನೇ ಹಂತದ ಯೋಜನೆಯಡಿ ಈಗಾಗಲೇ 3.5 ಕೋಟಿ ರೂ.ಗಳ ಅನುದಾನವನ್ನು ಈ ಕಾರ್ಯಕ್ಕಾಗಿಯೇ ಮೀಸಲಿಟ್ಟಿದ್ದು, ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ಸರ್ಕಾರದ ಮಟ್ದದಲ್ಲಿ ಚರ್ಚಿಸಿ ತರಲಾಗುವುದು ಎಂದರು.
ಒತ್ತುವರಿ ತೆರವು ಭರವಸೆ: ಶಬ್ಬೀರ್ ನಗರ, ಕೋರ್ಟ್ ಬಳಿ, ತೋಟಗಾರಿಕಾ ಇಲಾಖೆ ಮತ್ತು ಆಂಜನೇಯಸ್ವಾಮಿ ದೇವಾಲಯದ ಬಳಿ ನೀರಿನ ಸರಾಗ ಹರಿವು ಸಾಧ್ಯವಾಗಿಲ್ಲ. ಇವೆಲ್ಲವನ್ನು ಸಮರ್ಪಕವಾಗಿ ಅಧ್ಯಯನ ಕೈಗೊಂಡು ನೀರಿನ ಸರಾಗ ಹರಿವಿಗೆ ಅಗತ್ಯ ರೂಪುರೇಷೆಗಳನ್ನು ಅಧಿಕಾರಿಗಳು ನಿರ್ಧರಿಸಿ ವಾರದೊಳಗೆ ವರದಿ ಸಲ್ಲಿಸಲಿದ್ದಾರೆ.
ಡಿಸೆಂಬರ್ ವೇಳೆಗೆ ಕಾಮಗಾರಿ: ಕಾಲುವೆ ಕಾಮಗಾರಿ ಡಿಸೆಂಬರ್ ವೇಳೆಗೆ ಆರಂಭಗೊಳ್ಳಲಿದ್ದು, ಮುಂದಿನ ಮಳೆಗಾಲದಲ್ಲಿ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸುವ ಭರವಸೆಯನ್ನು ನೀಡುತ್ತೇನೆ. ಪ್ರಸ್ತುತ ಮಳೆಯಿಂದಾಗಿ ತೊಂದರೆಯಾಗುತ್ತಿರುವುದು ನಿಜ. ಆದರೆ ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿ ಶಾಶ್ವತ ಪರಿಹಾರ ಕೈಗೊಳ್ಳಲು ಕ್ರಮವಹಿಸಿದ್ದೇನೆ. ನಗರಸಭೆಯಿಂದ ನೀರು ಹರಿದುಹೋಗುವ ಸ್ಥಳಗಳಲ್ಲಿ ಒತ್ತುವರಿಯಾಗಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ದೃಢನಿರ್ಧಾರ ತೆಗೆದುಕೊಳ್ಳಬೇಕು. ಹಾಗಿಲ್ಲದೇ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯವಿಲ್ಲ ಎಂದು ನಗರಸಭಾ ಸದಸ್ಯರಿಗೆ ಕಿವಿಮಾತು ಹೇಳಿದರು.
ಪ್ರಭಾರ ಪೌರಾಯುಕ್ತೆ ಎಲ್.ರೂಪಾ, ತಾಲೂಕು ಸರ್ವೇಯರ್ ಚಿಕ್ಕಸ್ವಾಮಿ, ಹುಡಾ ಸದಸ್ಯ ಕಾರ್ಯದರ್ಶಿ ಶ್ರೀಧರ್, ಸಿಎಡಿಡಿ ಸಂಸ್ಥೆಯ ರವಿ, ನಗರಸಭಾ ಸದಸ್ಯರಾದ ರಾಧಾ, ಸ್ವಾಮಿಗೌಡ, ರಮೇಶ್, ಜಾಕೀರ್ ಇತರರು ಇದ್ದರು.