ತರೀಕೆರೆ: ಅಜ್ಜಂಪುರ ತಾಲೂಕಿನ ದೊಡ್ಡ ಬೋಕಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಇ.ಶರತ್ ತೀವ್ರ ಸ್ಪರ್ಧೆಯೊಡ್ಡಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಎಸ್.ಗುರುಮೂರ್ತಿ ಅವಿರೋಧ ಆಯ್ಕೆಯಾದರು.
ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸೇರಿ ಒಟ್ಟು 13 ಸದಸ್ಯ ಬಲದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಂದೇ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟು ಅಧ್ಯಕ್ಷ ಸ್ಥಾನಕ್ಕೆ ಡಿ.ಇ.ಶರತ್ ಹಾಗೂ ಕೆ.ಚೇತನ್ ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಧುಮುಕಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಗುರುಮೂರ್ತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಜಿದ್ದಾಜಿದ್ದಿನಿಂದ ಕೂಡಿದ್ದ ಅಧ್ಯಕ್ಷ ಸ್ಥಾನದ ಅಂತಿಮ ಸೆಣಸಾಟದಲ್ಲಿ ಡಿ.ಇ.ಶರತ್ ಒಂದು ಮತಗಳ ಅಂತರದಿಂದ ಪ್ರತಿಸ್ಪರ್ಧಿ ಕೆ.ಚೇತನ್ ಅವರನ್ನು ಪರಾಭವಗೊಳಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಸ್.ಗುರುಮೂರ್ತಿ ಅವಿರೋಧ ಆಯ್ಕೆಯಾದರು. ರಾಜಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧೆ ಸಹಜವಾದರೂ ನಂತರ ನಡೆಯುವ ಅಭಿವೃದ್ಧಿ ಕಾರ್ಯದಲ್ಲಿ ಪರಸ್ಪರ ಒಮ್ಮತದ ಸಲಹೆ ಸಹಕಾರ ಅತ್ಯಗತ್ಯ. ಸಹಕಾರಿ ಕ್ಷೇತ್ರದ ಪ್ರಗತಿಯಾದರೆ, ರೈತರ ಶ್ರೇಯೋಭಿವೃದ್ಧಿ ಸುಲಭವಾಗುವುದರಿಂದ ಎಲ್ಲ ಸದಸ್ಯರು ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ ಜಿಲ್ಲೆಯ ಎಲ್ಲ ಪಿಎಸಿಎಸ್‌ಗಳಿಗೆ ಸಾಲ ಸೌಲಭ್ಯ ಒದಗಿಸಲಾಗಿದ್ದು ಮುಂದಿನ ದಿನದಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಲಭ್ಯತೆ ಅನುಸಾರ ಅಗತ್ಯ ಆರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಅಧ್ಯಕ್ಷ ಡಿ.ಇ.ಶರತ್ ಮಾತನಾಡಿ, ಸರ್ವ ಸದಸ್ಯರ ಸಹಕಾರ ಪಡೆದು ದೊಡ್ಡಬೋಕಿಕೆರೆ ಪಿಎಸಿಎಸ್ ಪ್ರಗತಿಗೆ ಶ್ರಮಿಸಲಾಗುವುದು. ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಪಿಎಸಿಎಸ್ ನಿರ್ದೇಶಕರಾದ ಎಸ್.ಕೆ.ಬಸವರಾಜಪ್ಪ, ಎಸ್.ಸಿ.ಕಲ್ಲೇಶಪ್ಪ, ವಿ.ಕೆ.ನಾಗರಾಜಪ್ಪ, ಎಂ.ಎಸ್.ಯೋಗರಾಜಪ್ಪ, ಬಿ.ಶೇಖರಾಚಾರ್, ಹಾಲಮ್ಮ, ಲಕ್ಷ್ಮಮ್ಮ, ರಂಗಪ್ಪ, ಜಿ.ಒ.ಶೇಖರಪ್ಪ, ಮೇಲ್ವಿಚಾರಕ ಎಸ್.ಸತೀಶ್, ಸಿಇಒ ಎನ್.ಎಚ್.ರಾಜನಾಯ್ಕ, ಗುಮಾಸ್ತ ಡಿ.ಸಿ.ಅಶೋಕ್ ಮತ್ತಿತರರಿದ್ದರು.