ನ್ಯೂಸ್

ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ 23ಕ್ಕೆ

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆ ಅ.23ಕ್ಕೆ ನಡೆಯಲಿದೆ ಎಂದು ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ದಸರಾ ವಸ್ತುಪ್ರದರ್ಶನದಲ್ಲಿನ ನಂದಿನಿ ಕುಟೀರ ಮಳಿಗೆಗೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ನಿಗದಿಪಡಿಸಿರುವ ದಿನಾಂಕದಂದು ಚುನಾವಣೆ ನಡೆಯಲಿದೆ ಎಂದು ಹೇಳಿದರು.

ನಮ್ಮಲ್ಲಿ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಪಶು ಸಂಗೋಪನೆ, ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ನಿಗಮದ ಪ್ರಗತಿಯ ಬಗ್ಗೆ ಜನರಿಗೆ ತಿಳಿಸಬೇಕೆಂಬ ಉದ್ದೇಶದಿಂದ ವಸ್ತುಪ್ರದರ್ಶನ ಆವರಣದಲ್ಲಿ ಮಳಿಗೆಯನ್ನು ತೆರೆಯುತ್ತೇವೆ. ಇದರ ಮೂಲಕ ರೈತರು ಕುರಿ, ಕೋಳಿ ಮೇಕೆ, ಹಸು ಬಗ್ಗೆ ಸಾಕಷ್ಟು ಮಾಹಿತಿ ಪಡೆಯಬಹುದಾಗಿದೆ. ರಾಜ್ಯದಲ್ಲಿ ಹೈನುಗಾರಿಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಆದುದರಿಂದ ರೈತರು ಇಲ್ಲಿಗೆ ಬಂದು ಅಧಿಕಾರಿಗಳನ್ನು ಹಾಗೂ ಇಲ್ಲಿರುವ ಮಾಹಿತಿಯನ್ನು ನೋಡುವುದರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಸದ್ಯಕ್ಕೆ ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ಅಷ್ಟಕ್ಕೂ ಎರಡು ತಿಂಗಳ ಹಿಂದೆ ನಾಲ್ಕು ರೂ. ಹೆಚ್ಚಳ ಮಾಡಿದ್ದೇವೆ. ಬಿಜೆಪಿ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿದ್ದ 700 ಕೋಟಿ ರೂ.ಗಳ ಹಾಲಿನ ಪ್ರೋತ್ಸಾಹಧನವನ್ನು ನಮ್ಮ ಅವಧಿಯಲ್ಲಿ ನೀಡಿದ್ದೇವೆ. ಮಾತ್ರವಲ್ಲದೆ, ಜುಲೈವರೆಗೂ ನೀಡಿದ್ದು, ಆಯಾ ತಿಂಗಳ ಪ್ರೋತ್ಸಾಹಧನ ಆಯಾ ತಿಂಗಳೇ ವಿತರಿಸುವ ಬಗ್ಗೆಯೂ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಮ್ಯಾಟ್, ಮೇವು ಕಟಾವು ಯಂತ್ರವನ್ನು ಬೇಡಿಕೆಗೆ ಅನುಗುಣವಾಗಿ ವಿತರಿಸಲಾಗುತ್ತದೆ. ಎಲ್ಲ ರೈತರಿಗೂ ಎಕಕಾಲಕ್ಕೆ ಕೊಡಲು ಸಾಧ್ಯವಿಲ್ಲ. ಪ್ರತಿ ವರ್ಷ ಯಾರಿಗೆ ಸಿಕ್ಕಿಲ್ಲ ಅಂತಹವರಿಗೆ ಕೊಡುವ ಕೆಲಸವನ್ನು ಇಲಾಖೆ ಮಾಡಲಿದೆ ಎಂದು ತಿಳಿಸಿದರು.

ಇನ್ನೂ ಮೈಸೂರು ನಗರದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಶ್ನೆಗೆ ಈ ವಿಚಾರವಾಗಿ ನಗರ ಪೊಲೀಸ್ ಆಯುಕ್ತರನ್ನು ಕೇಳಬೇಕೆಂದರು. ಈ ಬಗ್ಗೆ ಸರ್ಕಾರದ ಮೇಲೆ ಸಂಸದರ ಆರೋಪ ಕುರಿತು ಬಿಜೆಪಿಯವರು ನಾವು ಮಾಡುವು ಒಳ್ಳೆಯ ಅಂಶಗಳನ್ನು ನೋಡುವುದಿಲ್ಲ. ಎಲ್ಲದರಲ್ಲೂ ಬೇಡವಾದುದನ್ನೇ ನೋಡುತ್ತಾ ಅಪಾದನೆ ಮಾಡುವುದೇ ಅವರ ಕೆಲಸವಾಗಿದೆ ಎಂದರು.

ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂಪ್ರಕಾಶ್, ಪಿ.ಎಂ.ಪ್ರಸನ್ನ, ಆರ್.ಚೆಲುವರಾಜು, ಕೆ.ಈರೇಗೌಡ, ಕೆ.ಎಸ್.ಕುಮಾರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ ಹಾಗೂ ಆಡಳಿತ ಮಂಡಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಸದಸ್ಯರು ಹಾಜರಿದ್ದರು.