ನ್ಯೂಸ್

ಅಧಿವೇಶನದ ದುಂದು ವೆಚ್ಚಕ್ಕೆ ಕಡಿವಾಣ

ಬೆಳಗಾವಿ: ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಹಿರಿಯ ಕೆಎಎಸ್ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿ ರಚನೆಗೆ ಜಿಲ್ಲಾಡಳಿತ ಕ್ರಮ ವಹಿಸಿದೆ. ಅಲ್ಲದೆ, ಅಧಿವೇಶನದಲ್ಲಿ ಪಾಲ್ಗೊಳ್ಳುವವರ ಖರ್ಚು-ವೆಚ್ಚದ ಮೇಲೆಯೂ ನಿಗಾ ವಹಿಸಲು ನಿರ್ಧರಿಸಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ. 13ರಿಂದ 24ರ ವರೆಗೆ ಚಳಿಗಾಲ ಅಧಿವೇಶನ ಜರುಗಲಿದೆ. ಈ ವೇಳೆ ಇಲ್ಲಿಗೆ ಬರುವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಇನ್ನಿತರರಿಗಾಗಿ ಸಾರಿಗೆ, ವಸತಿ, ಊಟಕ್ಕೆಂದು ಅನಗತ್ಯವಾಗಿ ಕೋಟ್ಯಂತರ ರೂ. ವ್ಯಯಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮುಂದಾಗಿದ್ದಾರೆ. ಆಯಾ ಇಲಾಖೆಯ ಸಚಿವರು, ಅಧಿಕಾರಿಗಳ ಹೆಸರಿನಲ್ಲಿ ಮತ್ತೆ ಪ್ರತ್ಯೇಕವಾಗಿ ಲಕ್ಷಾಂತರ ರೂ. ಖರ್ಚು ಮಾಡುವುದನ್ನು ತಡೆಗಟ್ಟಲೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಕೋಟ್ಯಂತರ ರೂ. ನಷ್ಟ: ಅಧಿವೇಶನದಲ್ಲಿ ರಾಜ್ಯದ 224 ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್‌ನ 75 ಸದಸ್ಯರು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಿವಿಧ ಇಲಾಖೆಯ 1,200ಕ್ಕೂ ಅಧಿಕ ಅಧಿಕಾರಿಗಳು, ಸಿಬ್ಬಂದಿ, ಸಚಿವ-ಶಾಸಕರ ಪಿಎ, ಗನ್‌ಮ್ಯಾನ್, ವಾಹನ ಚಾಲಕರು ಹಾಗೂ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾಧ್ಯಮ ಪ್ರತಿನಿಧಿಗಳು ಆಗಮಿಸುತ್ತಾರೆ. ಸರ್ಕಾರವು ಇವರಿಗೆಲ್ಲ ವಸತಿ, ಊಟ, ಸಾರಿಗೆ ಹಾಗೂ ಇನ್ನಿತರ ಸೌಲಭ್ಯಗಳಿಗೆಂದು 4ರಿಂದ 5 ಕೋಟಿ ರೂ. ವರೆಗೆ ವೆಚ್ಚ ಮಾಡುತ್ತಿದೆ. ಅಲ್ಲದೆ, ಸಚಿವರ ಹಾಗೂ ಅವರ ಪಿಎಗಳ ಆಪ್ತರು ಎಂದು ಹೇಳಿಕೊಂಡು ಸಾಕಷ್ಟು ಜನರು ಸರ್ಕಾರದ ಖರ್ಚಿನಲ್ಲಿಯೇ ಊಟ, ವಸತಿ, ಸಾರಿಗೆ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅನಗತ್ಯ ದುಂದುವೆಚ್ಚಗಳಿಗೆ ಕತ್ತರಿ ಹಾಕಿ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಹಾನಿ ತಡೆಯಲು ಸಮಿತಿ ರಚಿಸಲಾಗುತ್ತಿದೆ.

ಐದು ಸಮಿತಿ ರಚನೆ: ಅಧಿವೇಶನ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಹೊರತುಪಡಿಸಿ ಸುವರ್ಣಸೌಧದ ಒಳಾಂಗಣ ಮತ್ತು ಹೊರಾಂಗಣದಲ್ಲಿನ ಊಟದ ವ್ಯವಸ್ಥೆಯಲ್ಲಿ ಎಷ್ಟು ಜನ ಊಟ ಮಾಡುತ್ತಾರೆ? ಲಾಡ್ಜ್‌ಗಳಲ್ಲಿ ಬುಕ್ ಮಾಡುವ ಕೊಠಡಿ ಸಂಖ್ಯೆ ಹಾಗೂ ಅಲ್ಲಿ ಎಷ್ಟು ಜನರು ವಾಸ ಮಾಡುತ್ತಾರೆ? ಅಲ್ಲಿ ಬೆಳಗಿನ ಉಪಹಾರ, ಟೀ, ಮಧ್ಯಾಹ್ನ, ರಾತ್ರಿ ಊಟದಲ್ಲಿ ಎಷ್ಟು ಜನರಿರುತ್ತಾರೆ? ತುರ್ತು ಸಂದರ್ಭಕ್ಕಾಗಿ ಪಡೆದ ಬಾಡಿಗೆ ವಾಹನ ಹಾಗೂ ಆ ವಾಹನಗಳನ್ನು ಯಾರ‌್ಯಾರು ಬಳಕೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ ಪ್ರಥಮ ಬಾರಿಗೆ ಅಧಿವೇಶನ ಸಿದ್ಧತೆ ಮತ್ತು ನಿರ್ವಹಣೆಗಾಗಿ ಕೆಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಐದು ಸಮಿತಿ ರಚಿಸಲಾಗಿದೆ.

ಸರ್ಕಾರಿ ಸೌಲಭ್ಯಗಳ ದುರುಪಯೋಗ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 2015, 2017-18ನೇ ಸಾಲಿನಲ್ಲಿ ನಡೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ನಗರದ ಸಂಕಮ್, ಕೀರ್ತಿ, ಆದರ್ಶ, ಇಫಾ, ಮೆರಿಟನ್, ಸಂಗಮ, ಹುಬ್ಬಳ್ಳಿ- ಧಾರವಾಡ ನಗರದ ವಿವಿಧ ಲಾಡ್ಜ್‌ಗಳಲ್ಲಿ 1,820 ಕೊಠಡಿಗಳನ್ನು ಮುಂಗಡವಾಗಿ ಕಾಯ್ದ್ದಿರಿಸಲಾಗಿತ್ತು. ಇರುವ ಸರ್ಕಾರಿ ವಾಹನಗಳೊಂದಿಗೆ ವಿವಿಧ ಕೆಲಸಗಳಿಗಾಗಿ 135 ವಾಹನಗಳನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ಅಧಿವೇಶನ ಕರ್ತವ್ಯಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 4,567 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಇದರ ಹೊರತಾಗಿಯೂ ವಿವಿಧ ಇಲಾಖೆಯ ಕೆಲ ಅಧಿಕಾರಿಗಳು ಅಧಿವೇಶನದ ಹೆಸರಿನಲ್ಲಿ ಲಾಡ್ಜ್‌ಗಳಲ್ಲಿ ಹೆಚ್ಚುವರಿ ಕೊಠಡಿ ಹಾಗೂ ಬಾಡಿಗೆ ವಾಹನ ಪಡೆದುಕೊಳ್ಳುತ್ತಿದ್ದರು. ಇವುಗಳಿಗೆಲ್ಲ ಕಡಿವಾಣ ಹಾಕಿ ಸರ್ಕಾರದ ಅನುದಾನ ದುರುಪಯೋಗ ಆಗುವುದನ್ನು ಈ ಬಾರಿ ತಡೆಯಲು ಬೆಳಗಾವಿ ಜಿಲ್ಲಾಡಳಿತ ಮುಂದಾಗಿದೆ.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಖರ್ಚು-ವೆಚ್ಚದ ಮೇಲೆ ನಿಗಾ ವಹಿಸಲು ಮತ್ತು ನಿರ್ವಹಣೆಗಾಗಿ ಇನ್ನೆರಡು ದಿನಗಳಲ್ಲಿ ಐದು ಸಮಿತಿ ರಚಿಸಿ ಯೋಜನಾ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದೇನೆ. ಎಲ್ಲ ಸಮಿತಿಗಳಿಗೆ ಕೆಎಎಸ್ ಹಿರಿಯ ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಅಧಿವೇಶನದಲ್ಲಿ ಆಗಿದ್ದ ಅನಾನುಕೂಲತೆಗಳು, ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಲೂ ಸಹ ಸೂಚಿಸಿದ್ದೇನೆ.| ಆರ್.ವೆಂಕಟೇಶಕುಮಾರ. ಜಿಲ್ಲಾಧಿಕಾರಿ, ಬೆಳಗಾವಿ

| ಮಂಜುನಾಥ ಕೋಳಿಗುಡ್ಡ