ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ ಸಂಬಂಧ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಗುರುವಾರವೂ ತನಿಖೆ ಮುಂದುವರಿಸಿದ್ದಾರೆ.
ಪ್ರಾಧಿಕಾರದಲ್ಲಿನ 50:50ರ ಅನುಪಾತ, ಬದಲಿ ನಿವೇಶನ ಹಂಚಿಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಮುಡಾದ ಬಹುತೇಕ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ನಿರ್ಮಾಣವಾಗುವ ಬಡಾವಣೆಗಳಿಗೆ ಜಮೀನು ನೀಡಿದ ರೈತರಿಗೆ ಈ ಮೊದಲು 60:40ರ ಅನುಪಾತದಲ್ಲಿ ನಿವೇಶನಗಳನ್ನು ನೀಡಲಾಗುತ್ತಿತ್ತು. ಭೂಸ್ವಾಧೀನವಾದ ಜಮೀನಿಗೆ ಹಣದ ರೂಪದಲ್ಲಿ ಪರಿಹಾರ ನೀಡದಿದ್ದಲ್ಲಿ, ಸಂತ್ರಸ್ತರಿಗೆ ಒಟ್ಟು ಅಭಿವೃದ್ಧಿಪಡಿಸಲಾದ ನಿವೇಶನಗಳ ಪೈಕಿ ಶೇ. 40ರಷ್ಟು ನಿವೇಶನ ಸಿಗುತ್ತಿತ್ತು. 2020ರಲ್ಲಿ ಬಿಜೆಪಿ ಸರ್ಕಾರ ಅದನ್ನು 50:50ರ ಅನುಪಾತಕ್ಕೆ ಮರುನಿಗದಿ ಪಡಿಸಿ, ಸಂತ್ರಸ್ತರಿಗೆ ಒಟ್ಟು ನಿವೇಶನದ ಶೇ.50ರಷ್ಟನ್ನು ಬಿಟ್ಟುಕೊಡುವ ನಿಯಮ ರೂಪಿಸಿತು.
2020ರ ನಂತರದಲ್ಲಿ ಹಂಚಿಕೆಯಾಗುವ ನಿವೇಶನಗಳಿಗೆ ಮಾತ್ರ ನಿಯಮ ಇರಬೇಕಿತ್ತು. ಆದರೆ ಮುಡಾ ಅಧಿಕಾರಿಗಳು 30-40 ವರ್ಷದ ಹಿಂದೆ ಜಮೀನು ಕೊಟ್ಟವರಿಗೂ ಅದೇ ನಿಯಮದ ಅಡಿ ನಿವೇಶನಗಳನ್ನು ಹಂಚಿಕೆ ಮಾಡಿ ಲಾಭ ಮಾಡಿಕೊಂಡಿದ್ದಾರೆ.