ಕೆ.ಆರ್.ನಗರ: ನಾಲೆಯ ಕೊನೆ ಹಂತದವರೆಗೂ ಸರಾಗವಾಗಿ ನೀರು ಹರಿಸಬೇಕೆಂಬ ಕಾರಣದಿಂದ ಸರ್ಕಾರ ಪ್ರತಿ ವರ್ಷ ನಾಲೆಯ ಸ್ವಚ್ಛತೆ ಮತ್ತು ತ್ವರಿತ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡುತ್ತಾ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊನೆಯ ಭಾಗದ ಜಮೀನುಗಳಿಗೆ ನೀರುಹರಿಸಲು ಸಾಧ್ಯವಾಗಿಲ್ಲ ಎಂದು ಶಾಸಕ ಡಿ.ರವಿಶಂಕರ್ ಕಿಡಿಕಾರಿದರು.
ತಾಲೂಕಿನ ಸೌತನಹಳ್ಳಿ, ಕಾಮೇನಹಳ್ಳಿ ಮತ್ತು ಹೊಸೂರುಕಲ್ಲಹಳ್ಳಿ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ರೈತರ ಅಹವಾಲು ಆಲಿಸಿ ನಂತರ ಜಮೀನುಗಳು ಮತ್ತು ನಾಲೆಯ ಏರಿ ಪರಿಶೀಲಿಸಿ ಮಾತನಾಡಿದರು. ಸರ್ಕಾರದಿಂದ 90 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಮಾಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆಗೂ ಮುನ್ನ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ನೀರಾವರಿ ಇಲಾಖೆಯಿಂದ ನಾಲೆಗಳ ಸ್ವಚ್ಛತೆ ಮತ್ತು ದುರಸ್ತಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳು ಕಾಮಗಾರಿಯನ್ನು ಸಮಪರ್ಕವಾಗಿ ಮಾಡಿಸಿಲ್ಲ ಎಂದರು.
ನಾಲೆಯ ಕೊನೆ ಹಂತದ ಹಲವು ಗ್ರಾಮಗಳಿಗೆ ಈವರೆಗೂ ನಾಲೆಯ ನೀರು ತಲುಪಿಲ್ಲ. ಇದರಿಂದ ರೈತರು ಭತ್ತ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳಲು ಆಗುತ್ತಿಲ್ಲ. ಉತ್ತಮ ಮಳೆ ಆದ ಸಂದರ್ಭದಲ್ಲಿ ಮಳೆ ನೀರಿನಿಂದ ನಾಲೆ ಮತ್ತು ಕೊಲ್ಲಿಗಳು ತುಂಬಿ ಹರಿಯುತ್ತಿದ್ದವು. ಈ ಬಾರಿ ಮಳೆಯಾಗದ ಕಾರಣ ನಾಲೆಯ ನೀರನ್ನು ಆಶ್ರಯಿಸಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನನುಕೂಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಾಗದಿದ್ದರೂ ಕೊನೆ ಹಂತದ ಜಮೀನಿಗೆ ಸರಾಗವಾಗಿ ನೀರು ಹರಿಯಬೇಕು. ಈ ಬಗ್ಗೆ ಆಗಬೇಕಾದ ಕಾಮಗಾರಿಗಳನ್ನು ಮಾಡಿಸಬೇಕು ಎಂದು ಜೂನ್ ಮೊದಲ ವಾರದಲ್ಲಿ ನಡೆದ ನೀರಾವರಿ ಇಲಾಖೆ ಮತ್ತು ರೈತ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ರೈತ ಮುಖಂಡರು ಮತ್ತು ಗ್ರಾಮಸ್ಥರು ನಾಲೆ ನಿರ್ಮಾಣಗೊಂಡಾಗಿನಿಂದ ಈ ಸಮಸ್ಯೆಯನ್ನು ಕೊನೆ ಹಂತದ ರೈತರು ಅನುಭವಿಸುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಈವರೆಗೆ ಶಾಸಕರಾದವರಿಗೆ ಮತ್ತು ಇಲಾಖಾ ಅಧಿಕಾರಿಗಳಿಗೆ ದೂರು ನೀಡುತ್ತಿದ್ದರೂ ಉಪಯೋಗಕ್ಕೆ ಬಂದಿಲ್ಲ. ಈ ವಿಚಾರವನ್ನು ತಾವು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಪರಿಹಾರ ಒದಗಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಅವರಿಗೆ ಮನವಿ ಸಲ್ಲಿಸಿದರು.
ನೀರಾವರಿ ಇಲಾಖೆಯ ಇಇ ಈರಣ್ಣನಾಯಕ, ಎಇಇ ಗುರುರಾಜ್, ಇಂಜಿನಿಯರ್ ಅಯಾಜ್‌ಪಾಷ, ರೈತ ಮುಖಂಡರಾದ ಮೋಹನ್‌ಕುಮಾರ್, ಬಸವರಾಜು, ವಿಶ್ವಾಸ್, ರಾಜನಾಯಕ, ನಂದೀಶ್, ತಮ್ಮಯ್ಯ, ಸ್ವಾಮಿನಾಯಕ ಹಾಜರಿದ್ದರು.