ಚಿತ್ರದುರ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಡೆತ್‌ನೋಟ್ ಬರೆದಿಟ್ಟ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಅದಕ್ಕೆ ಸಚಿವರ ರಾಜೀನಾಮೆ ಕೇಳಿದ್ರೆ ಹೇಗೆ ಎಂದು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಪ್ರಶ್ನಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಿತ್ಯ ಅವರಿವರ ವಜಾಕ್ಕೆ ಒತ್ತಾಯಿಸುತ್ತಿದ್ದಾರೆ. ಮೊದಲು ತಮ್ಮ ಪಕ್ಷವನ್ನು ಸರಿಯಾಗಿ ಇಟ್ಟುಕೊಳ್ಳಲಿ ಎಂದರು.
ಅಬ್ದುಲ್ ಕಲಾಂ ಪ್ರಸ್ತಾಪ: ಹೇರ್ ಕಟ್ ಜಟಾಪಟಿ ವೈಯಕ್ತಿಕ ವಿಚಾರ. ಭಾರತೀಯ ಸಂಸ್ಕೃತಿ ಪ್ರಕಾರ ಸಚಿವರು ನಡೆದುಕೊಳ್ಳುತ್ತಿದ್ದಾರೆ. ದೇಶದ ರಾಷ್ಟ್ರಪತಿಯಾಗಿದ್ದ ಭಾರತರತ್ನ ಎಪಿಜೆ ಅಬ್ದುಲ್ ಕಲಾಂ ಅವರು ಹೇಗಿದ್ದರು. ಸ್ವತಂತ್ರವಾಗಿ ಬದುಕಲು ಇಲ್ಲಿ ಎಲ್ಲರಿಗೂ ಅವಕಾಶವಿದೆ. ಮಧು ಬಂಗಾರಪ್ಪ, ವಿಜಯೇಂದ್ರ ಅವರೇ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.
ಗಾಂಧೀಜಿ ಕಾಲದಿಂದಲೂ ಭಾರತವನ್ನು ಹಿಂದುಸ್ಥಾನ ಅಂತ ಕರೆಯುತ್ತಿದ್ದೇವೆ. ಇದು ಹೊಸ ವಿಚಾರವೇನಲ್ಲ. ಇಲ್ಲಿರುವ ಮುಸಲ್ಮಾನರೂ ಹಿಂದುಗಳ ಮಾದರಿಯಲ್ಲೇ ನೂರಾರು ವರ್ಷದಿಂದ ಬದುಕಿದ್ದಾರೆ. ಜಾತಿ-ಧರ್ಮಗಳ ಮಧ್ಯೆ ಸೌಹಾರ್ದ ಹಾಳು ಮಾಡೋದನ್ನು ದೇಶ, ಸಂವಿಧಾನ ಸಹಿಸುವುದಿಲ್ಲ ಎಂದರು.
ಭಾರತವನ್ನು ಹಿಂದು ರಾಷ್ಟ್ರ ಮಾಡೋದು ಹಿಡನ್ ಅಜೆಂಡಾವೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಈ ವಾದವನ್ನು ವಿರೋಧಿಸುತ್ತೇವೆ. ಸದಾ ಹಿಂದುತ್ವ, ರಾಮಮಂದಿರ ಅಂತ ಹೇಳಿದರೆ, ಬಡವರ ಹೊಟ್ಟೆ ತುಂಬುವುದಿಲ್ಲ. 10 ವರ್ಷದಲ್ಲಿ ಬಿಜೆಪಿ ಏನು ಅಭಿವೃದ್ಧಿ ಮಾಡಿದೆ ಎಂಬುದಕ್ಕೆ ಮೊದಲು ಉತ್ತರಿಸಲಿ. ಅದನ್ನು ಬಿಟ್ಟು ಭಾವನಾತ್ಮಕವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದರು.
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಶಾಸಕರನ್ನು ಹೋಲ್‌ಸೇಲ್ ಆಗಿ ಚೇಂಜ್ ಮಾಡುತ್ತೇವೆಂದು ಸಿ.ಟಿ.ರವಿ ಹೇಳುತ್ತಿದ್ದಾರೆ. ಆದರೆ, 2018ರಲ್ಲೇ ಇದಕ್ಕೆ ಅಂತ್ಯವಾಡಲಾಗಿದೆ. ಪಕ್ಷ ದ್ರೋಹಿಗಳಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರೇ ಪಾಠ ಕಲಿಸಿದ್ದಾರೆ. ಹೀಗಿರುವಾಗ ಚೇಂಜ್ ಸಾಧ್ಯವಿಲ್ಲದ ಮಾತು ಎಂದು ತಿರುಗೇಟು ನೀಡಿದರು.
ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ ಎಂಬ ದೂರು ಜಿಲ್ಲೆಯ ಕೆಲ ಭಾಗಗಳಲ್ಲಿ ರೈತರಿಂದ ಕೇಳಿಬಂದಿದ್ದು, ಈ ಸಂಬಂಧ ಕೃಷಿ ಇಲಾಖೆ, ಕಂಪನಿ ಜೊತೆಗೆ ಚರ್ಚಿಸಿದ್ದೇನೆ. ಕೆಲ ದಿನಗಳಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.