ನ್ಯೂಸ್

ಅಣ್ಣ ಸೂರಜ್ ಐಡಿ ವಶಕ್ಕೆ , ತಮ್ಮ ಪ್ರಜ್ವಲ್ ಜೈಲಿಗೆ

ಬೆಂಗಳೂರು: ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ೮ ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಬಾಡಿ ವಾರೆಂಟ್ ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆರೋಪಿ ಸೂರಜ್ ರೇವಣ್ಣನನ್ನು ಜು.೧ ರ ವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶಿಸಿತು. ನ್ಯಾಯಾಂಗ ಬಂಧನಲ್ಲಿದ್ದ ಸೂರಜ್‌ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಿದ್ದಾರೆ. ದೂರುದಾರನ ಮಾಹಿತಿ ಆಧರಿಸಿ ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಿದ್ದಾರೆ.
ಸಂತ್ರಸ್ತನ ದೂರು ಆಧರಿಸಿ ಹೊಳೆನರಸೀಪುರ ಠಾಣೆ ಪೊಲೀಸರು ಆರೋಪಿ ಸೂರಜ್‌ನನ್ನು ಭಾನುವಾರ ಹಾಸನದಲ್ಲಿ ವಶಕ್ಕೆ ಪಡೆದು ಸುಮಾರು ೮ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಬಳಿಕ ಆತನನ್ನು ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಆರೋಪಿಯನ್ನು ಕೋರಮಂಗಲದ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಆರೋಪಿಯನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿದ್ದರು. ಈ ನಡುವೆ ರಾಜ್ಯ ಸರ್ಕಾರ ಈ ಪ್ರಕರಣವನ್ನ ಸಿಐಡಿ ತನಿಖೆಗೆ ಆದೇಶಿತ್ತು. ಹೀಗಾಗಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ಆತನನ್ನು ವಶಕ್ಕೆ ಪಡೆಯಲು ಸಿಐಡಿ ಅಧಿಕಾರಿಗಳು ಸೋಮವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ೧೦ ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯವು ೮ ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.
ತನಿಖಾ ತಂಡ ನೇಮಕ:
ಪ್ರಕರಣದ ಎಸ್‌ಪಿಪಿಯಾಗಿ ಅಶೋಕ್ ನಾಯಕ್ ನೇಮಕಗೊಂಡಿದ್ದು ಪ್ರಕರಣ ಸಂಬಂಧ ಅಶೋಕ್ ನಾಯಕ್ ವಾದ ಮಂಡಿಸಲಿದ್ದಾರೆ. ಇನ್ನು ಪ್ರಕರಣದ ತನಿಖಾಧಿಕಾರಿಗಳಾಗಿ ಸಿಐಡಿ ಎಸ್.ಪಿ ವೆಂಕಟೇಶ್, ಡಿವೈಎಸ್‌ಪಿ ಉಮೇಶ್, ಇನ್‌ಸ್ಪೆಕ್ಟರ್ ನರೇಂದ್ರ ಬಾಬು ನೇಮಕಗೊಂಡಿದ್ದಾರೆ.
ಪ್ರಜ್ವಲ್‌ಗೆ ಮತ್ತೆ ನ್ಯಾಯಾಂಗ ಬಂಧನ:
ಅತ್ಯಾಚಾರ ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದ ಎಸ್‌ಐಟಿ ಅಧಿಕಾರಿಗಳು ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಬೆಂಗಳೂರಿನ ೪೨ ಎಸಿಎಂಎಂ ಕೋರ್ಟ್ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿ ಪ್ರಜ್ವಲ್‌ಗೆ ೧೪ ದಿನಗಳ ಕಾಲ(ಜು.೮ರವರೆಗೆ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಪ್ರಜ್ವಲ್ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ಇನ್ನು ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆದೇಶ ಕಾಯ್ದಿರಿಸಿದೆ. ಜೂನ್ ೨೬ಕ್ಕೆ ಜಾಮೀನು ಅರ್ಜಿ ಸಂಬಂಧ ಆದೇಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಜಾಮೀನು ಅರ್ಜಿ ಭವಿಷ್ಯ ಅಂದು ನಿರ್ಧಾರವಾಗಲಿದೆ.