ಶೃಂಗೇರಿ: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆ ಅಡಕೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಂಡು ಇಳುವರಿ ಕಡಿಮೆಯಾಗಿದ್ದು ನಿರ್ದಿಷ್ಟ ಅವಧಿಯಲ್ಲಿ ಸರಿಯಾದ ನಿರ್ವಹಣಾ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಂಜೀವ್ ಜಕಾತಿಮಠ ತಿಳಿಸಿದರು.
ಅಡ್ಡಗದ್ದೆ ಗ್ರಾಪಂ ಕಾವಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ತೋಟಗಾರಿಕೆ ಇಲಾಖೆ, ಪ್ರಕೃತಿ ರೈತ ಮಿತ್ರಕೂಟ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಎಲೆಚುಕ್ಕೆ ರೋಗ ಸಮಗ್ರ ನಿಯಂತ್ರಣ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೊಲ್ಲೆಟೋಟ್ರೈಕಮ್ ಶಿಲೀಂಧ್ರದಿಂದ ಸೋಗೆಗಳ ಮೇಲೆ ಹಳದಿ ಮತ್ತು ಕಪ್ಪುಬಣ್ಣದ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸಿಕೊಂಡು ಒಣಗಲು ಪ್ರಾರಂಭಿಸುತ್ತದೆ. ರೋಗಬಾಧಿತ ಒಣಗಿದ ಗರಿಗಳನ್ನು ಕತ್ತರಿಸಿ ನಾಶ ಮಾಡಬೇಕು. ಬಿಸಿಲು ಬೀಳುವಂತೆ ಮಾಡಲು ಅಂತರಬೆಳೆಗಳ ಅಥವಾ ಕಾಡು ಮರಗಳ ರೆಂಬೆಗಳನ್ನು ಕತ್ತರಿಸಬೇಕು ಎಂದರು.
ಕಾವಡಿ ಕೃಷಿ ಪ್ರಾಥಮಿಕ ಸಂಘದ ಅಧ್ಯಕ್ಷ ಬೇಗಾನೆ ಪ್ರಸನ್ನ ಮಾತನಾಡಿ, ಮಲೆನಾಡಿನ ರೈತರು ವಾಣಿಜ್ಯ ಬೆಳೆಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಸ್ತುತ ಬಂದ ಮಳೆಯಿಂದ ಅಡಕೆ ಬೆಳೆಗಳಿಗೆ ಔಷಧ ಸಿಂಪಡಣೆ ಕೂಡ ಕಷ್ಟಕರವಾಗಿದೆ. ಅಡಕೆ ಬೆಳೆಗಳ ರೋಗದ ಸಮಸ್ಯೆಗಳಿಗೆ ತಜ್ಞರು ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಪ್ರಕೃತಿ ರೈತಮಿತ್ರಕೂಟದ ಅಧ್ಯಕ್ಷ ಶ್ರೀಧರ್ ರಾವ್ ಮಾತನಾಡಿ, ಮಲೆನಾಡಿನ ಸಾಂಪ್ರದಾಯಿಕ ಬೆಳೆಯಾದ ಅಡಕೆ ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಅಡಕೆ ಇಳುವರಿ ಹೆಚ್ಚಿಸಲು ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ ಎಂದರು.
ಕೃಷಿ ಸಮಾಜದ ನಿರ್ದೇಶಕ ವೆಂಕಟೇಶ್ ಭಟ್, ಅಡ್ಡಗದ್ದೆ ಗ್ರಾಪಂ ಅಧ್ಯಕ್ಷ ಸುಂದರೇಶ್, ತಾಲೂಕು ರೈತ ಸಂಘದ ಮಾಜಿ ಅಧ್ಯಕ್ಷ ಕೆಲವಳ್ಳಿ ಗುಂಡಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಹನುಮಂತಪ್ಪ ಇದ್ದರು.