ಕೊಪ್ಪ ತಾಲೂಕಿನ ಕೆಸವೆ ಗ್ರಾಮದ ಕೃಷಿಕರೊಬ್ಬರ ತೋಟದಲ್ಲಿ ಅಡಕೆ ಹರಳು ಉದುತ್ತಿರುವುದು. 
ನ್ಯೂಸ್

ಅಡಕೆಗೆ ಕೊಳೆ, ಎಲೆಚುಕ್ಕಿ ರೋಗ ಆತಂಕ

ಕೊಪ್ಪ: ವಾಡಿಕೆಗಿಂತ ತಾಲೂಕಿನಲ್ಲಿ ಹೆಚ್ಚು ಮಳೆಯಾದ ಪರಿಣಾಮ ಅಡಕೆ ಬೆಳೆಗಾರರಲ್ಲಿ ಕೊಳೆ ರೋಗ ಹಾಗೂ ಎಲೆಚುಕ್ಕಿ ರೋಗದ ಆತಂಕ ಎದುರಾಗಿದೆ. ಇದರ ಜತೆ ನಿರಂತರವಾಗಿ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

ತಾಲೂಕಿನಲ್ಲಿ ಜನವರಿಯಿಂದ ಜು.11ರವರೆಗೆ ವಾಡಿಕೆಯಂತೆ 1051.8 ಮಿ.ಮೀ ಮಳೆಯಾಗಬೇಕಿತ್ತು. ಆದರೆ 1682.3 ಮಿ.ಮೀ. ನಷ್ಟು ಮಳೆ ಬಿದ್ದಿದ್ದು ಶೇ.60ರಷ್ಟು ಮಳೆ ಹೆಚ್ಚಾಗಿದೆ. ಕೊಪ್ಪ ಕಸಬಾದಲ್ಲಿ ಶೇ.62, ಹರಿಹರಪುರ ಹೋಬಳಿಯಲ್ಲಿ ಶೇ.81, ಮೇಗುಂದ ಹೋಬಳಿಯಲ್ಲಿ ಶೇ.26ರಷ್ಟು ಮಳೆ ಹೆಚ್ಚಾಗಿದೆ.

ಪ್ರಸಕ್ತ ವರ್ಷದಲ್ಲಿ ಮೇನಲ್ಲಿ ಮಳೆಯಾದ ಕಾರಣ ತಾಲೂಕಿನ ರೈತರಿಗೆ ಮುಂಗಾರು ಪೂರ್ವ ಕೃಷಿ ತಯಾರಿಗೆ ತೊಂದರೆಯಾಗಿದೆ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆಗೆ ಯಾವುದೆ ಅಂತರವಿಲ್ಲದೆ ನಿರಂತರ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ನಿರಂತರ ಮಳೆಯಾಗುತ್ತಿರುವುದರಿಂದ ಅಡಕೆ ತೋಟಗಳಿಗೆ ಔಷಧ ಸಿಂಪಡಣೆ ಕಾರ್ಯದಲ್ಲಿ ತೊಡಕಾಗಿದೆ. ಸಕಾಲದಲ್ಲಿ ಔಷಧ ಸಿಂಪಡಣೆಯಾಗದೆ ಇದ್ದಲ್ಲಿ ಕೊಳೆ ರೋಗ ಹಾಗೂ ಬೆಳೆ ನಷ್ಟವಾಗುವ ಆತಂಕ ರೈತರಲ್ಲಿದೆ. ಹಲವು ಅಡಕೆ ತೋಟದಲ್ಲಿ ಹರಳು ಉದುರುತ್ತಿದೆ. ಪ್ರತಿವರ್ಷ ಮಲೆನಾಡಿನ ರೈತರಿಗೆ ಮಳೆಯಿಂದಾಗಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ಸಲನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ.