ಮದ್ದೂರು: ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ 11 ದಿನದ ಹಸುಗೂಸುವಿನ ಜತೆಗೆ ಇಬ್ಬರು ಮಕ್ಕಳು ಮತ್ತು ತಂದೆ ಜತೆ ವಾಸವಿದ್ದ ಮಹಿಳೆಯನ್ನು ಅಧಿಕಾರಿಗಳು ಮಂಡ್ಯದ ಸ್ವಧಾರ ಕೇಂದ್ರಕ್ಕೆ ಬಿಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ಪತ್ರಿಕೆಯಲ್ಲಿ ನ.13ರಂದು ಗ್ರಾಪಂ ಆವರಣವೇ ಆಶ್ರಯ! ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಹಿಳೆಯಿಂದ ಮಾಹಿತಿ ಪಡೆದುಕೊಂಡರು. ನಂತರ ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿಗೆ ಆರೋಗ್ಯ ತಪಾಸಣೆ ಮಾಡಿಸಲಾಯಿತು.
ಸಿಡಿಪಿಒ ಪ್ರದೀಪ್ ಮಾತನಾಡಿ, ತಾಯಿ ಅನ್ನಪೂರ್ಣ, 13 ದಿನದ ಹೆಣ್ಣು ಮಗು ಹಾಗೂ 3 ವರ್ಷದ ಅಭಯ್‌ಗೌಡ, 5 ವರ್ಷದ ತನ್ಮಯ್‌ಗೌಡ ಇಬ್ಬರು ಗಂಡು ಮಕ್ಕಳನ್ನು ಮಂಡ್ಯದ ಅಕ್ಷಯ ನಿಕೇತನ ಸ್ವಧಾರ ಕೇಂದ್ರಕ್ಕೆ ಬಿಡಲಾಗಿದೆ. ಅನ್ನಪೂರ್ಣ ಅವರ ವಯಸ್ಸಾದ ತಂದೆ ರಮೇಶ್ ಅವರನ್ನು ಮಂಡ್ಯ ಅನಾಥಶ್ರಮದಲ್ಲಿ ಇರಲು ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ, ಪಿಡಿಒ ಲೀಲಾವತಿ ಹಾಗೂ ಅಧಿಕಾರಿಗಳಿದ್ದರು.