ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಹಿಂದಿನ ಮುಡಾ)ದ ಅಕ್ರಮದಲ್ಲಿ ನಿವೇಶನ ಪಡೆದ ಎಲ್ಲರಿಗೂ ಶಿಕ್ಷೆ ಖಚಿತ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ. ಯಾರ‌್ಯಾರು ಅಕ್ರಮ ಮಾಡಿದ್ದಾರೋ ಅವರೆಲ್ಲರಿಗೂ ಶಿಕ್ಷೆಯಾಗುವುದು ಖಚಿತ ಎಂದು ಈಗಾಗಲೇ ಹೇಳಿದ್ದೇನೆ. ನಿವೇಶನಗಳ ಅಕ್ರಮದಲ್ಲಿ ನೂರಾರು ಕೋಟಿ ರೂ. ವ್ಯವಹಾರ ನಡೆದಿರುವ ಕಾರಣಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿನೇಶ್ ಅವರನ್ನು ಬಂಧಿಸಿದ್ದಾರೆ ಎಂದರು.
ಮುಡಾ ಪ್ರಕರಣದಲ್ಲಿ ನಾನು ಆರೋಪ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ತನಿಖೆ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಯಿತು ಎಂಬ ಕಾರಣಕ್ಕೆ ಮತ್ತು ಸಿದ್ದರಾಮಯ್ಯ ತಮ್ಮ ಪ್ರಭಾವ ಬೀರಿ ಸುಳ್ಳು ವರದಿ ಕೊಡಿಸಿದ್ದಾರೆ. ಹೀಗಾಗಿ ಪ್ರಕರಣ ಮುಚ್ಚಿ ಹೋಯಿತು ಎಂದು ಜನಸಾಮಾನ್ಯರಲ್ಲಿ ತಪ್ಪು ಭಾವನೆ ಮೂಡಿತ್ತು. ಆದರೆ, ಆರೋಪಕ್ಕೆ ಪೂರಕವಾಗಿ ನಾನು ಕೊಟ್ಟಿರುವ ಸಾಕ್ಷ್ಯಾಧಾರಗಳು ಮುಂದೊಂದು ದಿನ ಕ್ರಮವಾಗುತ್ತದೆ ಎಂಬುದಾಗಿ ನಾನು ಪ್ರಾರಂಭದಲ್ಲೇ ಹೇಳಿದ್ದೇನೆ. ಅದೇ ರೀತಿ ಆಗಿದೆ ಎಂದರು.
ಅಕ್ರಮ ವಿಚಾರದಲ್ಲಿ ಯಾರಿಗೂ ಕ್ಲೀನ್ ಚಿಟ್ ಕೊಟ್ಟಿಲ್ಲ. ಆದರೆ, ಅಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುಟುಂಬವೂ ಕಾರಣ ಎಂಬುದಕ್ಕೆ ಸಾಕ್ಷಿ ಇಲ್ಲ ಎಂದು ಹೇಳುತ್ತಾರೆ. ಅವರ ಪರವಾಗಿ ವರದಿ ಕೊಟಿದ್ದಾರೆ ಅಷ್ಟೆ. ತೀರ್ಪು ಕೊಟ್ಟಿಲ್ಲ. ನ್ಯಾಯಾಲಯ ತೀರ್ಪು ಕೊಟ್ಟಾಗಷ್ಟೇ ಅಂತಿಮವಾಗಲಿದೆ ಎಂದರು.
ಅಕ್ರಮದಲ್ಲಿ ಸಾಕಷ್ಟು ಅಧಿಕಾರಿಗಳು ಭಾಗಿಯಾಗಿದ್ದು, ಸಾಕಷ್ಟು ಜನ ಪ್ರಭಾವ ಬಳಸಿ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ. ಅವರೆಲ್ಲರೂ ಹಂತ ಹಂತವಾಗಿ ಬಂಧನವಾಗುತ್ತಾರೆ ಎಂದರು.
ಮುಡಾದಲ್ಲಿ ನೂರಾರು ಕೋಟಿ ರೂ.ಗಳ ಅಕ್ರಮ ಹಣ ವ್ಯವಹಾರ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಕೆಲವರ ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಮುಂದಿನ ದಿನಗಳಲ್ಲಿ ಅವರಿಗೆಲ್ಲ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ. ಇದು ಅಕ್ರಮ ಮಾಡುವ ವ್ಯಕ್ತಿಗಳಿಗೆ ಒಂದು ಎಚ್ಚರಿಕೆಯಾಗಲಿದೆ. ಎಷ್ಟೇ ದೊಡ್ಡ ಪ್ರಭಾವಿ ಸ್ಥಾನದಲ್ಲಿದ್ದರೂ ಅಪರಾಧ ಕೃತ್ಯ ಎಸಗಿದಾಗ ನನ್ನಂತಹ ಸಾಮಾನ್ಯ ವ್ಯಕ್ತಿ ದೂರು ಅರ್ಜಿ ಕೊಟ್ಟರೂ ಶಿಕ್ಷೆಯಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಹೇಳಿದರು.