ತ್ಯಾಗರ್ತಿ: ಸಮೀಪದ ನಾಡವಳ್ಳಿ ಗ್ರಾಮದ ಸರ್ಕಾರಿ ಗ್ರಾಮಠಾಣ ಭೂಮಿ ಅಕ್ರಮ ಸಾಗುವಳಿ ತೆರವುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ತ್ಯಾಗರ್ತಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಪಂ ಅಧ್ಯಕ್ಷರ ಕುಟುಂಬದಿಂದ ಸುಮಾರು 20 ಎಕರೆ ಸರ್ಕಾರಿ ಭೂಮಿ ಒತ್ತುವರಿ ತೆರವು ಗೊಳಿಸುವ ಕುರಿತು ಶನಿವಾರ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೆ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಬುಧವಾರ ನಾಡವಳ್ಳಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಆಗಮಿಸಿ ಪಿಡಿಒ ಮೋಹನ್ ಅವರನ್ನು ತರಾಟೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಜಮೀನು ವ್ಯಾಜ್ಯ ಇತ್ಯರ್ಥ ವಾಗುವವರೆಗೆ ಯಾರಿಗೂ ಆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಿಕ್ಸಿ ಮಂಜು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಈ ಜಮೀನು ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜಮೀನು ಒತ್ತುವರಿ ನಿಯಮಾನುಸಾರ ತೆರವುಗೊಳಿಸುವ ಬಗ್ಗೆ ಪಿಡಿಒ ಮೋಹನ್ ಕ್ರಮ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ. ತಾಪಂ ಇಒ ಶಿವಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಸಾಗುವಳಿ ಬಗ್ಗೆ ಮಾಹಿತಿ ಪಡೆದು ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಾಡವಳ್ಳಿ ಗ್ರಾಮದ ಪ್ರಮುಖರಾದ ರಾಮಚಂದ್ರ, ರಾಘವೇಂದ್ರ, ರವೀಂದ್ರ, ನಾಗರಾಜ್, ಮಂಜಪ್ಪ , ಗಣಪತಿ, ಮಂಜುನಾಥ, ಮೋಹನ ಇನ್ನಿತರರು ಇದ್ದರು