ಸಿಂಧನೂರು: ತಾಲೂಕಿನಲ್ಲಿ ಗುರುವಾರ ಬಿದ್ದ ಮಳೆಯಿಂದ ಬರೊಬ್ಬರಿ 12,500 ಎಕರೆ ಭತ್ತದ ಬೆಳೆ ನೆಲಕ್ಕುರುಳಿ ಹಾಳಾಗಿರುವುದನ್ನು ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಅಂದಾಜಿಸಿದೆ. ಇನ್ನೇನು ಬೆಳೆ ರೈತರ ಕೈ ಸೇರುವ ಸಂದರ್ಭದಲ್ಲಿಯೇ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ತಾಲೂಕಿನ ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಭತ್ತ ಬೆಳೆದಿದ್ದು ಇನ್ನೇನು ವಾರ ಕಳೆದಿದ್ದರೆ ಬಹುತೇಕ ಭತ್ತ ಕಟಾವಿಗೆ ಬರುವುದಿತ್ತು. ನಾವೊಂದು ಬಗೆದರೆ, ದೈವವೊಂದು ಬಗೆಯಿತು ಎನ್ನುವಂತೆ ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಒಕ್ಕರಿಸಿದ ಅಕಾಲಿಕ ಮಳೆ ರೈತರ ಬದುಕನ್ನೇ ಮೂರಾಬಟ್ಟಿ ಮಾಡಿದೆ. ಕಟಾವಿಗೆ ಬಂದ, ಹಾಲು ಕಟ್ಟಿದ್ದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.
ಮಳೆ- ಬಿರುಗಾಳಿಗೆ ಭತ್ತವೆಲ್ಲ ಸಂಪೂರ್ಣ ಮಲಗಿಕೊಂಡಿದ್ದು ಅದನ್ನು ಎತ್ತಿ ಬೆಳೆ ಉಳಿಸಿಕೊಳ್ಳುವುದು ಅಸಾಧ್ಯದ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ತುರ್ವಿಹಾಳ, ಗುಂಜಳ್ಳಿ, ಜಾಲಿಹಾಳ, ಗೊರೇಬಾಳ, ಸಾಲಗುಂದ, ಕುನ್ನಟಗಿ, ಜವಳಗೇರಾ ಹೋಬಳಿ ವ್ಯಾಪ್ತಿಯಲ್ಲಿಯೇ ಅಕಾಲಿಕ ಮಳೆಯು ದಕ್ಕೆಯುಂಟು ಮಾಡಿದೆ. ಈಗಾಗಲೇ ರೈತರು ಭತ್ತವನ್ನು ಬೆಳೆದುಕೊಳ್ಳಲು ಎಕರೆಗೆ 35 ಸಾವಿರ ರೂ. ವೆಚ್ಚ ಮಾಡಿದ್ದು ಈಗ ಕೈಗೆ ಬಂದಿದ್ದ ಭತ್ತದ ಬೆಳೆ ಅಕಾಲಿಕ ಮಳೆ ನುಂಗಿದೆ. ಬೆಳೆ ಬೆಳೆದುಕೊಳ್ಳಲು ರೈತರು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದಾರೆ. ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ.
ಕಂದಾಯ ಇಲಾಖೆಯಿಂದ ಸರ್ವೇ:
ತಾಲೂಕಿನಲ್ಲಿ ಗುರುವಾರ ಬಿದ್ದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆ ನಷ್ಟವುಂಟಾದ ಬೆನ್ನಲ್ಲೇ ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ ಹಾಗೂ ಎಂಎಲ್‌ಸಿ ಸರ್ಕಾರದ ಗಮನ ಸೆಳೆದು ಕಂದಾಯ ಸಚಿವರ ಮೂಲಕ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಶುಕ್ರವಾರದಿಂದಲೇ ಬೆಳೆ ನಷ್ಟದ ವರದಿ ತಯಾರಿಸಲು ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ ಸನ್ನದ್ಧವಾಗಿದ್ದು ಇಲ್ಲಿಯವರೆಗೆ ತಾಲೂಕಿನಲ್ಲಿ ಅಂದಾಜು 12,500 ಎಕರೆಗೂ ಅಧಿಕವಾಗಿ ಅಕಾಲಿಕ ಮಳೆಯಿಂದ ಬೆಳೆ ನಷ್ಟವುಂಟಾಗಿರುವ ಬಗ್ಗೆ ಸರ್ವೇ ನಡೆಸಲಾಗಿದೆ.
ಕಟಾವಿಗೆ ಬಂದಿದ್ದ ಭತ್ತವೇ ಹೆಚ್ಚಿನ ನಷ್ಟವುಂಟು ಮಾಡಿದ್ದು ಇನ್ನೂ ಕಾಳುಕಟ್ಟುವ ಹಂತದ ಕೆಂಪು ಹತ್ತಿದ್ದ ಭತ್ತದ ಬೆಳೆ ನಷ್ಟವು ಆಗಿದೆ. ಆದರೂ ಬೆಳೆ ಉಳಿಸಿಕೊಳ್ಳಲು ರೈತಾರು ತೀವ್ರ ತರಹದ ಕಸರತ್ತು ನಡೆಸಿದ್ದಾರೆ. ಭತ್ತದ ಗದ್ದೆಯಲ್ಲಿನ ನೀರೆಲ್ಲ ತೆಗೆದು ಹಾಕಿ, ಬಿದ್ದಿರುವ ಭತ್ತವನ್ನು ಮೇಲೆತ್ತುವ ಕಾರ್ಯ ನಡೆಸಿದ್ದು ಆದರೂ, ಹೆಚ್ಚಿನ ಫಲಪ್ರದ ಕಾಣುತ್ತಿಲ್ಲ. ಬಿದ್ದಿರುವ ಭತ್ತವು ಸಂಪೂರ್ಣ ಕೆಸರಿನಲ್ಲಿ ಬಿದ್ದಿದೆ. ಎರಡ್ಮೂರು ದಿನಗಳು ಕಳೆದರೆ ಮೊಳಕೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಲೀಜ್ ಮಾಡಿದವರಿಗೆ ಸಂಕಷ್ಟ: ಈಗಾಗಲೇ ಭತ್ತದ ಬೆಲೆ ಮಾರುಕಟ್ಟೆಯಲ್ಲಿ ಗಣನೀಯ ಇಳಿಕೆಯಾಗಿದ್ದು ಇದರ ಜತೆಗೆ ಈಗ ಅಕಾಲಿಕ ಮಳೆಯಿಂದ ಭತ್ತದ ಗದ್ದೆಗಳನ್ನು ಎಕರೆಗೆ 15 ರಿಂದ 20 ಚೀಲ ಮಾಲೀಕರಿಂದ ಲೀಜ್ ಪಡೆದ ಗುತ್ತಿಗೆದಾರರು ಈಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಕಟಾವಿಗೆ ಬಂದಿದ್ದ ಭತ್ತವನ್ನು ಕಟಾವು ಮಾಡಿ, ಲೀಜ್ ಕೊಟ್ಟು ಸಾಲದಿಂದ ಮುಕ್ತರಾಗಬೇಕೆನ್ನುವ ಸಂದರ್ಭದಲ್ಲಿಯೇ ಸಮಸ್ಯೆ ಎದುರಾಗಿದೆ.
ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಅಂದಾಜು 12,500 ಎಕರೆ ಪ್ರದೇಶದಲ್ಲಿ ನಷ್ಟವುಂಟಾಗಿದ್ದು ಇನ್ನೂ ಸರ್ವೇ ನಡೆಸಲಾಗುತ್ತಿದೆ. ತೊಗರಿ ಬೆಳೆಗೂ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದ್ದು ಉಳಿದಂತೆ ಭತ್ತದ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ಸರ್ವೇ ಮುಗಿಸಿ ವರದಿ ಸಲ್ಲಿಸಲಾಗುವುದು. ನಜೀರ್ ಅಹ್ಮದ್ ಸಹಾಯಕ ಕೃಷಿ ನಿರ್ದೇಶಕ, ಸಿಂಧನೂರು.