ನ್ಯೂಸ್

‘ಅಂಶು’ಗೆ ಧ್ವನಿಯಾದ ಜಸ್‌ಕರಣ್: ಪಂಜಾಬಿ ಮೂಲದ ಗಾಯಕನ ಕನ್ನಡ ಮೋಡಿ

ಬೆಂಗಳೂರು: ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದವರು ಪಂಜಾಬ್ ಮೂಲದ ಗಾಯಕ ಜಸ್‌ಕರಣ್ ಸಿಂಗ್. ತಮ್ಮ ಮಧುರ ಧ್ವನಿಯಿಂದ ಸಮ್ಮೋಹಗೊಳಿಸುವ ಇವರಿಗೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ ದಾಟುತ’ ಗೀತೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಈ ಹಾಡು ಹೆಚ್ಚುವೈರಲ್ ಆಗುವುದರ ಜತೆಗೆ ಜಾಲತಾಣದಲ್ಲಿ ರೀಲ್ಸ್ ಕಂಡಿತ್ತು. ಇದೀಗ ಕನ್ನಡದಲ್ಲೇ ಬ್ಯಾಕ್ ಟು ಬ್ಯಾಕ್ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡಲು ಅವಕಾಶ ದೊರೆತಿದೆ. ಅದರಲ್ಲಿ ಇತ್ತೀಚೆಗಷ್ಟೆ ‘ಅಂಶು’ ಚಿತ್ರದ ‘ನೀನು ನಂಬೋ ನಾಳೆ’ ಎಂಬ ಶೀರ್ಷಿಕೆ ಹಾಡು ಬಿಡುಗಡೆಯಾಗಿದೆ. ಸಾಂಗ್‌ಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ‘ನೀನು ನಂಬೋ ನಾಳೆ, ನೀರಾ ಮೇಲೆ ಗುಳ್ಳೆ, ಬಿಂಬ ಕಾಣೋ ವೇಳೆ ನಿಜವೂ ಒಂದು ಸುಳ್ಳೆ’ ಎಂದು ಸಾಗುವ ಈ ಹಾಡನ್ನು ಮಹೇಂದ್ರ ಗೌಡ ರಚಿಸಿದ್ದು, ಕೆ.ಸಿ ಬಾಲಸಾರಂಗನ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಸಿ.ಚನ್ನಕೇಶವ ನಿರ್ದೇಶಿಸುತ್ತಿರುವ ಮೊದಲ ಚಿತ್ರ ‘ಅಂಶು’. ಸೈಕಡೆಲಿಕ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ದೊರೆತಿದ್ದು, ಇದೇ 21ರಂದು ಬಿಡುಗಡೆಗೆ ಸಿದ್ಧವಾಗಿದೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣ, ವಿಘ್ನೇಶ್​ ಶಂಕರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.