ಶತ ಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಗಾಂಧಿನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗಾಂಧಿ ನಗರ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಆಯೋಜಿಸಿದ್ದ ಭೀಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಹಾನ್ ಹೋರಾಟಗಾರ ಅಂಬೇಡ್ಕರ್. ಅಸ್ಪಶ್ಯತೆ ತೊಲಗಿಸಲು ಹೋರಾಟ ಮಾಡಿ ದಲಿತರ ಧ್ವನಿಯಾಗಿದ್ದರು ಎಂದರು.
ಶಿಕ್ಷಣ ಮತ್ತು ಸಬಲೀಕರಣದಿಂದ ಅಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಅದರ ಜತೆಯಲ್ಲಿ ಈ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂಬುದು ಅಂಬೇಡ್ಕರ್ ಅವರ ಆಶವಾಗಿತ್ತು. ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎಂದು ಹೇಳಿದ್ದರು ಎಂದು ತಿಳಿಸಿದರು.
ಡಿಸಿಪಿ ಕೆ.ಎಸ್.ಸುಂದರ್ ರಾಜ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಎಲ್ಲರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇವರ ಆಲೋಚನೆ, ದೃಷ್ಟಿಕೋನಗಳು ಕಾಲವನ್ನು ಮೀರಿದವುಗಳಾಗಿದ್ದವು. ಆರ್ಥಿಕ ಅಭಿವೃದ್ಧಿ, ಕೈಗಾರಿಕರಣ,ರಾಜಕೀಯ ಭಾಗವಹಿಸಿಕೆ, ಮಹಿಳಾ ಸಬಲೀಕರಣ ಮತ್ತು ಸಮಾನತೆ ಹಾಗೂ ಸಾಮಾಜಿಕ ಏಕೀಕರಣದ ಬಗ್ಗೆ ಪ್ರಸ್ತುತಕ್ಕೆ ಸಂಬಂಧಿಸಿದಂತೆ ಮೊದಲೇ ಯೋಂಚಿಸಿದ್ದರು ಎಂದರು.
ಇದಕ್ಕೂ ಮೊದಲು ಗಾಂಧಿನಗರದ ಬಸ್ ನಿಲ್ದಾಣದಿಂದ ಟೌನ್‌ಹಾಲ್ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆವರೆಗೆ ಡಾ. ಬಿ.ಆರ್.ಅಂಬೇಡ್ಕರ್ ಗಾಂಧಿನಗರ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಸಾಂಸ್ಕ ೃತಿಕ ತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಿತು,
ಡಾ.ಬಿ.ಆರ್.ಅಂಬೇಡ್ಕರ್ ದಲಿತ ಮಹಾಸಭಾದ ಅಧ್ಯಕ್ಷ ಪುಟ್ಟರಂಗಸ್ವಾಮಿ, ಎಸ್.ಸಿ., ಎಸ್.ಟಿ.ಉದ್ದಿಮೆದಾರರ ಸಂಘದ ಆರ್.ಮಂಜುನಾಥ್, ನಗರ ಪಾಲಿಕೆ ಮಾಜಿ ಸದಸ್ಯೆ ಡಾ.ಅಶ್ವಿನಿ ಶರತ್, ಮುಖಂಡರಾದ ಶರತ್, ದೇವರಾಜು, ಪರಮಾನಂದ, ಕಿರಣ್, ಪ್ರೀತಮ್, ಚರಣ್ ಇತರರಿದ್ದರು.