ಬೀರೂರು: ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕ. ಅವರ ತತ್ವ, ಆದರ್ಶಗಳು ಇಂದಿಗೂ ಜೀವಂತ ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘದ ಕಡೂರು ತಾಲೂಕು ಅಧ್ಯಕ್ಷ ಬಿ.ಎನ್.ಆನಂದ್ ತಿಳಿಸಿದರು.
ಪಟ್ಟಣದ ಸರಸ್ವತಿಪುರಂ ಬಡಾವಣೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಜಯಂತಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಫೂರ್ತಿದಾಯಕ ಪ್ರಯಾಣ ಆಧರಿಸಿದೆ. ಅಂಬೇಡ್ಕರ್ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಶತಮಾನಗಳಿಂದಲೂ ತಳ ಸಮುದಾಯಗಳಿಗೆ ಆದಂತಹ ಅನ್ಯಾಯಗಳನ್ನು ಸರಿಪಡಿಸಿ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿದರು.
ದೇಶ ಸಂಪೂರ್ಣ ಸಮಾನತೆ ಕಂಡಾಗ ಬಾಬಾಸಾಹೇಬರ ಕನಸು ನನಸಾಗುತ್ತದೆ ಎಂಬುದನ್ನು ನಾವು ಅರಿಯಬೇಕಾಗಿದೆ. ಹಾಗೆಯೇ ಬಾಬು ಜಗಜೀವನ್‌ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರನಾಗಿ ದೇಶದ ಕಟ್ಟಕಡೆಯ ವ್ಯಕ್ತಿಯೂ ಉಪವಾಸ ಅನುಭವಿಸದಂತೆ ಮಾಡಿದ ಪುಣ್ಯಾತ್ಮ. ಇಂತಹ ಮಹನೀಯರು ಬದುಕಿದ ರೀತಿಯೇ ನಮಗೆ ಆದರ್ಶ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರಗಳನ್ನು ಪಟ್ಟಣದ ರಾಜಬೀದಿಗಳಲ್ಲಿ ಡಿಜೆಯೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಡಾ. ಬಿ.ಆರ್.ಅಂಬೇಡ್ಕರ್ ಸಂಘದ ಧನಂಜಯ, ಪವನ್, ಸುನಿಲ್, ಅಂಜು, ಮನೋಜ್, ದರ್ಶನ್, ಕರ್ನಾಟಕ ರಾಜ್ಯ ಮಾದಿಗ ಸಂಘದ ನವೀನ್, ದಿಲೀಪ್, ವರುಣ, ಲೋಕೇಶ್, ಮಲ್ಲಿಕಾರ್ಜುನ್, ಕಿರಣ್ ಮತ್ತು ಭೀಮ್ ಸೇನೆಯ ಯುವಕರು ಮತ್ತು ಬಡಾವಣೆಯ ಮಹಿಳೆಯರು ಇದ್ದರು.