ನ್ಯೂಸ್

ಅಂತರಿಕ್ಷ ವೈದ್ಯಕೀಯ ಸಂಶೋಧನೆಯತ್ತ ಮಹತ್ವದ ಹೆಜ್ಜೆ

ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಅಂಗ ಸಂಸ್ಥೆಯಾದ ಊಟಿಯ ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಫಾರ್ಮಸ್ಯೂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಕೆ.ಗೌತಮರಾಜನ್ ರಷ್ಯಾದ ಮಾಸ್ಕೋದಲ್ಲಿನ ಐಬಿಎಂಪಿ-ಆರ್‌ಎಎಸ್ ಸಂಸ್ಥೆ ನಡೆಸಿದ ಪ್ರಾದೇಶಿಕ ಶರೀರಶಾಸ್ತ್ರ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಮೂಲಕ ಜೆಎಸ್‌ಎಸ್-ಎಎಚ್‌ಇಆರ್ ಅಂತರಿಕ್ಷ ವೈದ್ಯಕೀಯ ಸಂಶೋಧನೆಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರತ ಸರ್ಕಾರದ ಓವರ್‌ಸೀಸ್ ಫೆಲೋಶಿಫ್ ಯೋಜನೆಯಡಿ ಈ ತರಬೇತಿಯು ವಾಸಿಲೀನಾ ಗಲಿನಾ ಯು ಮಾರ್ಗದರ್ಶನದಲ್ಲಿ ನಡೆದಿದ್ದು, ಡಾ.ಗೌತಮ ರಾಜನ್ ಅವರು ಅಂತರಿಕ್ಷ ಶರೀರ ವಿಜ್ಞಾನದ ಪ್ರಮುಖ ಅಂಶಗಳಲ್ಲಿ ತಾಂತ್ರಿಕ ತರಬೇತಿಯನ್ನು ಪಡೆದಿದ್ದಾರೆ. ಅಲ್ಲದೆ, ಡಾ.ಗೌತಮ್ ರಾಜನ್ ಅವರು ಆರ್‌ಒಎಸ್‌ಸಿಒಎಸ್‌ಎಂಒಎಸ್‌ಗೆ ಭೇಟಿ ನೀಡಿ ಶೈಕ್ಷಣಿಕ ಉಪನ್ಯಾಸಗಳನ್ನು ನೀಡಿದ್ದಾರೆ. ಐಬಿಎಂಪಿ ಮತ್ತು ಜೆಎಸ್‌ಎಸ್-ಎಎಚ್‌ಇಆರ್ ನಡುವಿನ ಭವಿಷ್ಯದ ಸಹಯೋಗಕ್ಕಾಗಿ ಪರಸ್ಪರ ಒಡಂಬಡಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಅಂತರಿಕ್ಷ ಹಾಗೂ ವೈದ್ಯಕೀಯ ಸಂಶೋಧನೆಯ ಕ್ಷೇತ್ರಗಳಲ್ಲಿಯೂ ಭಾರತೀಯ ಸಂಸ್ಥೆಗಳು ಬೆಳೆಯಬೇಕಾದ ಸಮಯ ಬಂದಿದ್ದು, ಈ ಬೆಳವಣಿಗೆಯೊಂದಿಗೆ ಜೆಎಸ್‌ಎಸ್-ಎಎಚ್‌ಇಆರ್ ಹೊಸ ಭಾಷ್ಯ ಬರೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಡಾ. ಗೌತಮ ರಾಜನ್ ಅವರ ಈ ತರಬೇತಿಯು ನಮ್ಮ ಸಂಶೋಧನಾ ಪರಿಕಲ್ಪನೆಯಲ್ಲಿ ಹೊಸ ಆಯಾಮಗಳನ್ನು ತೆರೆಯಲ್ಲಿದ್ದು, ಜಾಗತಿಕ ಸಹಯೋಗ, ಜ್ಞಾನ-ವಿನಿಮಯ ಹಾಗೂ ಅಂತರಿಕ್ಷ ಔಷಧ ಶಾಸ್ತ್ರದಲ್ಲಿ ಭಾರತ ಮುನ್ನಡೆಯುವತ್ತ ಇದು ಸಹಕಾರಿಯಾಗಲಿದೆ ಎಂದು ಕುಲಪತಿ ಡಾ.ಬಸವನಗೌಡಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಅಂತರಿಕ್ಷ ವೈದ್ಯಕೀಯ ಸಂಶೋಧನೆಯ ಮೂಲಕ ನಾವು ಔಷಧ ವಿಜ್ಞಾನ ಶಾಸ್ತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದೇವೆ. ಈ ನಿಟ್ಟಿನಲ್ಲಿ ಜೆಎಸ್‌ಎಸ್-ಎಎಚ್‌ಇಆರ್ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಸಮಕುಲಾಧಿಪತಿ ಡಾ.ಬಿ.ಸುರೇಶ್ ಹರ್ಷವ್ಯಕ್ತಪಡಿಸಿದ್ದಾರೆ.

ನಿಜವಾದ ಶಿಕ್ಷಣ ಮತ್ತು ಸಂಶೋಧನೆಯು ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ, ಮಾನವೀಯತೆಗೆ ಉಪಕಾರಿಯಾಗುವ ಹೊಸ ಕ್ಷೇತ್ರಗಳಲ್ಲಿ ಬೆಳೆಯುವ ಅವಶ್ಯಕತೆ ಇದೆ. ಬಾಹ್ಯಾಕಾಶ ಔಷಧವು ನಮ್ಮ ಪ್ರಾಚೀನ ಜ್ಞಾನ ಮತ್ತು ಆಧುನಿಕ ವಿಜ್ಞಾನವು ಮೇಳೈಸುವ ಒಂದು ಕ್ಷೇತ್ರವಾಗಿದ್ದು, ಜೆಎಸ್‌ಎಸ್ ಪರಿವರ್ತನ ವಿಜ್ಞಾನವನ್ನು ಮುಂಚೂಣಿಯಲ್ಲಿರಿಸುವ ಈ ಪ್ರಯತ್ನವನ್ನು ಬೆಂಬಲಿಸಲು ನಮಗೆ ಸಂತೋಷವಾಗುತ್ತದೆ. ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠ