ಅರಸೀಕೆರೆ (ಗ್ರಾಮಾಂತರ): ತಾಲೂಕಿನ ಕಸಬಾ ಹೋಬಳಿ ಕೆಲ್ಲಂಗೆರೆ ಗ್ರಾಮದ ಶ್ರೀ ಅಂತರಘಟ್ಟಮ್ಮ ಹಾಗೂ ಉಡುಸಲಮ್ಮ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ಗುರುವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಮುಂಜಾನೆ ಅಂತರಘಟ್ಟಮ್ಮ ಹಾಗೂ ಉಡುಸಲಮ್ಮ ದೇವಾಲಯದಲ್ಲಿ ಅಮಾವಾಸ್ಯೆ ಅಂಗವಾಗಿ ಪಂಚಾಮೃತ ಅಭಿಷೇಕ ,ಕುಂಕುಮಾರ್ಚನೆ ನಡೆಯಿತು. ಸಂಜೆ ವಿಶೇಷ ಬಣ್ಣ ಬಣ್ಣದ ಹೂಗಳು ಹಾಗೂ ಹೊಂಬಾಳೆಯೊಂದಿಗೆ ಅಂತರಘಟ್ಟಮ್ಮ, ಉಡುಸಲಮ್ಮ ದೇವಿ, ಚಿಕ್ಕಯ್ಯ, ದೂತರಾಯ ಸ್ವಾಮಿಗೆ ಮಾಡಿದ ಅಲಂಕಾರ ಅಪಾರ ಭಕ್ತರ ಕಣ್ಮನ ಸೆಳೆಯಿತು.
ಸಂಜೆ ಮಹಾಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಗ್ರಾಮವನ್ನು ಹಸಿರು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ನಗರದ ಐಬಿ ಆಟೋ ನಿಲ್ದಾಣದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಕೆಲ್ಲಂಗೆರೆ ಗ್ರಾಮಸ್ಥರು ,ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.