ಕಾವೇರಿ ಕಾಲೇಜಿನಲ್ಲಿ ಆಯೋಜಿಸಿದ್ದ ನಡೆದ ನೇತ್ರದಾನ ಕುರಿತ ಜಾಗೃತಿ ಹಾಗೂ ನೋಂದಣಿ ಕಾರ್ಯಕ್ರಮದಲ್ಲಿ ಡಾ. ಯತಿರಾಜ್, ಬೆನಡಿಕ್ಟ್ ಆರ್ ಸಲ್ದಾನ, ಉಪನ್ಯಾಸಕರಾದ ವೀಣಾ, ಪ್ರಿಯಾಮುದ್ದಪ್ಪ, ನಾಗರಾಜು, ಭೋಜಮ್ಮ ಪಾಲ್ಗೊಂಡಿದ್ದರು. 
ನ್ಯೂಸ್

ಅಂಗಾಂಗ ದಾನ ಮಾಡಿದರೆ ಜೀವನ ಸಾರ್ಥಕ

ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅಭಿಪ್ರಾಯ

ವಿರಾಜಪೇಟೆ: ಮನುಷ್ಯ ಮರಣದ ನಂತರ ಕಣ್ಣು ಹಾಗೂ ದೇಹದ ಇತರ ಅಂಗಾಂಗಗಳನ್ನು ದಾನ ಮಾಡಿದರೆ ಸಾವಿನಲ್ಲೂ ಸಾರ್ಥಕತೆ ಮೆರೆಯಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅಭಿಪ್ರಾಯಪಟ್ಟರು.

ವಿರಾಜಪೇಟೆ ಕಾವೇರಿ ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್ ಘಟಕ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸೋಮವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ನೇತ್ರದಾನದ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಗಾಂಗ ದಾನ ಪರಿಕಲ್ಪನೆ ನಮಗೆ ಪೌರಾಣಿಕ ಕಥೆಗಳಿಂದಲೇ ದೊರೆಯುತ್ತದೆ. 1954 ರಲ್ಲಿ ಜಗತ್ತಿನ ಮೊದಲ ಕಿಡ್ನಿ ಕಸಿಯನ್ನು ಮಾಡಲಾಯಿತು. ಮಾನವನ ದೇಹದಲ್ಲಿ ಹಲವಾರು ಅಂಗಗಳನ್ನು ಸಾವಿನ ನಂತರ 6 ಗಂಟೆಯ ಒಳಗೆ ದಾನವಾಗಿ ನೀಡಬಹುದು. ಇದರಿಂದ ನಾವು ಸತ್ತ ನಂತರ ನಮ್ಮ ದೇಹದ ಅಂಗಾಂಗಗಳು ಜಗತ್ತಿನ ಅನುಭವವನ್ನು ಪಡೆಯುತ್ತದೆ ಎಂದು ತಿಳಿಸಿದರು.

ನಮ್ಮ ದೇಶದಲ್ಲಿ 8-10 ಮಿಲಿಯನ್ ಜನ ಹುಟ್ಟು ಅಂಧರಿದ್ದಾರೆ. ನಾವು ಸಾವಿನ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಕತ್ತಲಿನಲ್ಲಿರುವ ಇಬ್ಬರು ಕುರುಡರ ಪಾಲಿಗೆ ಆಶಾಕಿರಣವಾಗಬಹುದು. ದಾನ ನೀಡಲು ಇಚ್ಛಿಸುವವರು ಕುಟುಂಬಸ್ಥರು ವ್ಯಕ್ತಿ ಮರಣ ಹೊಂದಿದ ಆರು ಗಂಟೆಗಳ ಒಳಗಾಗಿ ಜಿಲ್ಲಾ ಐ ಬ್ಯಾಂಕಿಗೆ ಮಾಹಿತಿ ನೀಡಿ ಅವರ ಕಣ್ಣುಗಳನ್ನು ಸಂಗ್ರಹಿಸಲು ನೆರವಾಗಬೇಕು. ಈ ಮೂಲಕ ಸಾವಿನ ನಂತರ ಮಣ್ಣು ಸೇರುವ ಅಥವಾ ಸುಟ್ಟು ಬೂದಿಯಾಗುವ ನಿಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಬೇರೆಯವರ ಬಾಳಿನಲ್ಲಿ ಬೆಳಕಾಗಿ ಎಂದು ಮನವಿ ಮಾಡಿದರು.

ಕಾಲೇಜು ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಮತನಾಡಿ, ಯುವ ಜನತೆ ನೇತ್ರದಾನದ ಮಹತ್ವವನ್ನು ಅರಿತು ತಮ್ಮ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಿ ನೇತ್ರ ದಾನ ಮಾಡುವಂತೆ ಹುರಿದುಂಬಿಸಬೇಕೆಂದರು.

ಕಾವೇರಿ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಎನ್‌ಸಿಸಿಯ 25 ಕೆಡೆಟ್ಸ್ , ಎನ್‌ಎಸ್‌ಎಸ್‌ನ 20 ಸ್ವಯಂ ಸೇವಕರು ಹಾಗೂ 10 ಉಪನ್ಯಾಸಕರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಕೆ.ಜಿ.ವೀಣಾ, ಐಕ್ಯೂಎಸಿ ಸಂಯೋಜಕಿ ಪ್ರಿಯಾಮುದ್ದಪ್ಪ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ಎಚ್.ವಿ.ನಾಗರಾಜು, ಎನ್‌ಸಿಸಿ ಅಧಿಕಾರಿ ಭೋಜಮ್ಮ, ಎನ್‌ಎಸ್‌ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.