ನ್ಯೂಸ್

ಅಂಗವಿಕಲೆ ಮೇಲೆ ಮೈದುನನಿಂದ ಅತ್ಯಾಚಾರ-ಕೊಲೆಗೆ ಯತ್ನ

ಎಚ್.ಡಿ.ಕೋಟೆ: ತಾಲೂಕಿನ ಜಿನ್ನಹಳ್ಳಿ ಗ್ರಾಮದಲ್ಲಿ ಶನಿವಾರ ಅಂಗವಿಕಲ ಮಹಿಳೆಯ ಮೇಲೆ ಮೈದುನನೇ ಅತ್ಯಾಚಾರಕ್ಕೆ ಯತ್ನಿಸಿದ್ದು, ವಿರೋಧ ಮಾಡಿದ್ದಕ್ಕಾಗಿ ಮಹಿಳೆ ಮತ್ತು ತಡೆಯಲು ಬಂದ ಆಕೆಯ ಸಹೋದರನಿಗೆ ಚಾಕುವಿನಿಂದ ಇರಿದಿದ್ದಾನೆ.

ಘಟನೆಯ ನಂತರ ಆರೋಪಿ ನಾಗನಾಯಕ(33) ಸ್ಥಳದಿಂದ ಪರಾರಿಯಾಗಿದ್ದಾನೆ. ಮರಳೂರು ನಾಯಕ (ಮೂಗಣ್ಣ) ಅವರ ಪತ್ನಿ ನಾಗಮ್ಮ (38) ಹಾಗೂ ಈಕೆಯ ಸಹೋದರ ಮರಳೂರು ನಾಯಕ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ನಾಗನಾಯಕ

ಏನಿದು ಘಟನೆ?: ನಾಗಮ್ಮ ಮತ್ತು ಮರಳೂರು ನಾಯಕ (ಮೂಗಣ್ಣ) ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಹತ್ತು ವರ್ಷಗಳ ಹಿಂದೆ ಗಂಡನಿಂದ ಬೇರ್ಪಟ್ಟ ನಾಗಮ್ಮ ಅದೇ ಗ್ರಾಮದಲ್ಲಿರುವ ತನ್ನ ತಂದೆಯ ಮನೆ ಪಕ್ಕದಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಮಕ್ಕಳ ಜತೆ ವಾಸವಾಗಿದ್ದಾರೆ. ಶನಿವಾರ ಮಕ್ಕಳು ಕೆಲಸಕ್ಕೆಂದು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಮೈದುನ (ಗಂಡನ ತಮ್ಮ) ನಾಗನಾಯಕ ಕುಡಿದ ಮತ್ತಿನಲ್ಲಿ ನಾಗಮ್ಮ ಅವರ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ನಾಗಮ್ಮ ರಕ್ಷಣೆಗಾಗಿ ಕೂಗಿಕೊಂಡಾಗ ಪಕ್ಕದ ಮನೆಯಲ್ಲಿದ್ದ ಆಕೆಯ ಸಹೋದರ ಮರಳೂರು ನಾಯಕ ಓಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ನಾಗನಾಯಕ ಚಾಕುವಿನಿಂದ ನಾಗಮ್ಮ ಅವರ ಬೆನ್ನಿಗೆ ಇರಿದಿದ್ದು, ತಡೆಯಲು ಬಂದ ಮರಳೂರು ನಾಯಕ ಅವರ ಹೊಟ್ಟೆ, ತೊಡೆ ಹಾಗೂ ತೋಳಿನ ಭಾಗಕ್ಕೆ ಬಲವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಮಹಿಳೆ ಸಹೋದರ ಮರಳೂರುನಾಯಕ

ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಅಣ್ಣ-ತಂಗಿಯನ್ನು ಗ್ರಾಮಸ್ಥರು ತುರ್ತು ವಾಹನದಲ್ಲಿ ಹಂಪಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಚ್.ಡಿ.ಕೋಟೆ ಪಟ್ಟಣ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜು ಅವರ ಮಾರ್ಗದರ್ಶನದಲ್ಲಿ ಹಂಪಾಪುರ ಉಪ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿ ನಾಗನಾಯಕನ ಬಂಧನಕ್ಕೆ ಬಲೆ ಬೀಸಿದ್ದಾರೆ.