ದೇಶದ ಸುಸ್ಥಿರ ಅಭಿವೃದ್ಧಿ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಅಂಗವಿಕಲರ ಪುನಶ್ಚೇತನವಾಗದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಿಶೇಷಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ತಿಳಿಸಿದರು.
ನಗರದ ಸಂಸ್ಕೃತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಸಕ್ಷಮ’ ದಿವ್ಯಾಂಗ ಸೇವಾ ಕೇಂದ್ರದ ಮೈಸೂರು ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಭಾರತ ದೇಶದಲ್ಲಿ ಅಂದಾಜು 7ರಿಂದ 8 ಕೋಟಿ ಅಂಗವಿಕಲರಿದ್ದಾರೆ. ಇವರನ್ನು ಮುಖ್ಯವಾಹಿನಿಗೆ ತರಬೇಕು. ಸರಿಯಾದ ತರಬೇತಿಯನ್ನು ನೀಡಿ, ಅವರಿಂದ ಆಗುವಂತಹ ಕೆಲಸಗಳನ್ನು ಮಾಡಲು ಅವಕಾಶ ನೀಡಬೇಕು. ಆಗ ಅವರಿಗೂ ಒಂದು ದಾರಿಯಾಗುತ್ತದೆ. ಮಾನವ ಸಂಪನ್ಮೂಲವೂ ಬಳಕೆಯಾಗುತ್ತದೆ ಎಂದರು.
ಅಂಗವಿಕಲರ ಸಬಲೀಕರಣಕ್ಕಾಗಿ ಸರ್ಕಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನುದಾನವಿದ್ದರೂ, ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಅಗತ್ಯಕ್ಕೆ ತಕ್ಕ ಅನುದಾನವಿದೆ. ಆದರೆ ಅಧಿಕಾರಶಾಹಿಯು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕುತ್ತಿಲ್ಲ. ಶಿಫಾರಸ್ಸು, ಅಧಿಕಾರಿಗಳ ಜತೆ ಒಡನಾಟವಿರುವವರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಆದ್ದರಿಂದ ತಳಮಟ್ಟದಲ್ಲಿ ಇರುವ ಅಂಗವಿಕಲರಿಗೂ ಸೌಲಭ್ಯ ದೊರಕುವಂತಹ ವಾತಾವರಣ ನಿರ್ಮಾಣವಾಗಬೇಕು. ಅದಕ್ಕಾಗಿ ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಕಾರ್ಯನಿರತವಾಗಬೇಕು ಎಂದರು.
ಅಂಗವಿಕಲತೆಯನ್ನು ತಗ್ಗಿಸಲು ಕುಟುಂಬ, ವೈದ್ಯರು ಹಾಗೂ ಇಡೀ ಸಮಾಜವೇ ಕಾರ್ಯತತ್ಪರವಾಗಬೇಕು. ಅಂಗವಿಕಲರಿಗೆ ಕೊಟ್ಟಿರುವ ಸಾಧನ-ಸಲಕರಣೆ ಉಪಯುಕ್ತವಾಗುತ್ತಿಲ್ಲ. ಇದರ ಬಗ್ಗೆ ಸಮಗ್ರವಾಗಿ ಅಧ್ಯಯನವಾಗಬೇಕು. ಸರ್ಕಾರದಿಂದ ತನಿಖೆಯಾಗಬೇಕು. ಏಕೆಂದರೆ ಅಂಗವಿಕಲರ ವಿಷಯವೂ ಮಾನವಹಕ್ಕಿನ ವಿಷಯವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದ್ದರಿಂದ ಅಂಗವಿಕಲರಿಗೆ ಸೌಲಭ್ಯ ಸಮರ್ಪಕವಾಗಿ ದೊರೆಯದಿದ್ದರೆ ಕಾನೂನು ಹೋರಾಟ ಮಾಡಲು ಮುಂದಾಗಲಿದ್ದೇವೆ ಎಂದರು.
ಸಕ್ಷಮ ಮೈಸೂರು ಜಿಲ್ಲಾ ಘಟಕ ಅಧ್ಯಕ್ಷ ಜಯರಾಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶಂಕರ ಗೌಡ ಪಾಟೀಲ್, ಎಬಿವಿಪಿ ನಗರ ಸಮಿತಿ ಅಧ್ಯಕ್ಷ ಅಮೃತ್ ರಾವ್, ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಕೇಶವ್ ಕುಮಾರ್, ಮುಖರ್ಜಿ ಫೌಂಡೇಷನ್ ಪ್ರತಿನಿಧಿ ಸುಬ್ಬಯ್ಯ, ವೆಂಕಟೇಶ್ ಮೂರ್ತಿ, ರಮೇಶ್ ಪ್ರಭು ಮತ್ತಿತರರು ಭಾಗವಹಿಸಿದ್ದರು.