ಹುಣಸೂರು; ಅಂಗನವಾಡಿಯಿಂದ ಪಿಎಚ್.ಡಿವರೆಗೆ ಹುಣಸೂರಿನಲ್ಲೇ ಶಿಕ್ಷಣ ಪಡೆಯಲು ಅಗತ್ಯವಿರುವ ಶೈಕ್ಷಣಿಕ ಕೇಂದ್ರವನ್ನು ಸ್ಥಾಪನೆ ಮಾಡಿರುವ ಹೆಮ್ಮೆ ಮತ್ತು ಸಮಾಧಾನ ನನ್ನದಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಂತಸವ್ಯಕ್ತಪಡಿಸಿದರು.
ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ, ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಅಂಬೇಡ್ಕರ್ ಭವನದಲ್ಲಿ ಶನಿವಾರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ 15 ವರ್ಷಗಳ ಅಧಿಕಾರ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. 2008ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ತಾಲೂಕಿನ ಶೈಕ್ಷಣಿಕ ಪರಿಸ್ಥಿತಿಯನ್ನು ಅವಲೋಕಿಸಿ ಅದರ ಉನ್ನತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ವ್ಯಾಸಂಗದಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿರುವ ವಿದ್ಯಾರ್ಥಿಗಳಿಗೆ ನನ್ನ ತಾಯಿ ರತ್ನಮ್ಮನವರ ಹೆಸರಿನಲ್ಲಿ ಚಿನ್ನದ ಪದಕ ನೀಡುವ ಯೋಜನೆ ಆರಂಭಿಸಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅವಶ್ಯ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಅಂಗನವಾಡಿಯಿಂದ ಪಿಎಚ್.ಡಿವರೆಗೆ: ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಮಾತ್ರವಲ್ಲದೇ ಪಿಎಚ್.ಡಿ ಗಳಿಸಲು ಅಗತ್ಯ ಕೋರ್ಸ್‌ಗಳನ್ನು ತರಲಾಗಿದೆ. ತಾಲೂಕಿನಲ್ಲಿ ಅಂಗನವಾಡಿಯಿಂದ ಆರಂಭಿಸಿ ಸಂಶೋಧನಾ ವಿದ್ಯಾರ್ಥಿಯಾಗಿ ಪಿಎಚ್.ಡಿ ಪಡೆಯಲು ಅನುಕೂಲವಾಗುವಂತೆ ಶೈಕ್ಷಣಿಕ ಕ್ಷೇತ್ರವನ್ನು ಬೆಳೆಸಲಾಗಿದೆ. ಕಳೆದ 8 ವರ್ಷಗಳಿಂದ ಸಿಇಟಿ, ನೀಟ್ ತರಬೇತಿ ಕಾರ್ಯಾಗಾರವನ್ನು ಸ್ನೇಹಜೀವಿ ಸಂಸ್ಥೆಯೊಂದಿಗೆ ನಡೆಸಲಾಗುತ್ತಿದೆ. ಇದೀಗ ಸ್ಪೋಕನ್ ಇಂಗ್ಲಿಷ್, ಟಿಇಟಿ, ಪೊಲೀಸ್ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ನೀಡಲು ಮುಂದಾಗಿದ್ದೇನೆ ಎಂದರು.
ಹುಣಸೂರು ನಗರದಲ್ಲಿ ಜಿಟಿಟಿಸಿ(ಸರ್ಕಾರಿ ಟೂಲ್ಸ್ ಅಂಡ್ ಟ್ರೇನಿಂಗ್ ಸೆಂಟರ್) ಸ್ಥಾಪಿಸಿ ವಾರ್ಷಿಕ ಕನಿಷ್ಠ 200 ಮಂದಿಗೆ ಉದ್ಯೋಗ ಖಾತ್ರಿ ನೀಡುವ ಕಾರ್ಯ ಮಾಡಿದ್ದೇನೆ. ತಾಲೂಕಿನ ಆದಿವಾಸಿ ವಿದ್ಯಾರ್ಥಿಗಳು ಸ್ಪೋಕನ್ ಇಂಗ್ಲಿಷ್ ಕೋರ್ಸ್‌ನಿಂದ ಅನುಕೂಲವಾಗಿದೆ. ರಸ್ತೆ, ಚರಂಡಿ ನಿರ್ಮಾಣ ಸಹಜ ಪ್ರಕ್ರಿಯೆ. ಆದರೆ ಶಿಕ್ಷಣ ಕ್ಷೇತ್ರದ ಬಲವರ್ಧನೆಯಾದಲ್ಲಿ ಮಾತ್ರ ಪ್ರಗತಿ ಸಾಧ್ಯವೆಂದು ಮನಗಂಡು ಇಂತಹ ಕ್ರಮಗಳನ್ನು ಅನುಸರಿಸಿದ್ದೇನೆ ಎಂದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಮತ್ತು ಡೀನ್ ಡಾ.ಎ.ಟಿ.ಶಿವರಾಮು ಮಾತನಾಡಿ, ಇಂದಿನ ದಿನಗಳಲ್ಲಿ ನಿಮ್ಮ ಅಂಕಪಟ್ಟಿ ನೋಡಿ ಉದ್ಯೋಗ ಕೊಡುವ ಕಾಲ ಹೋಯಿತು. ನಿಮ್ಮಲ್ಲಿ ಕೌಶಲವಿದ್ದರೆ ಉದ್ಯೋಗ ಗ್ಯಾರಂಟಿ. ವಿಷಯವನ್ನು ಕಿವಿಗೊಟ್ಟು ಕೇಳುವ ಅಭ್ಯಾಸ ನಿಮ್ಮದಾಗಲಿ. ಸಮಚಿತ್ತದಿಂದ ಕೇಳುವ ಮನಸಿದ್ದವರು ಮಾತ್ರ ಸಾಧನೆಗೈಯಬಲ್ಲರು. ದಿನದ 1140 ನಿಮಿಷಗಳನ್ನು ಸದ್ಬಳಕೆ ಮಾಡಿಕೊಳ್ಳುವ ಗುಣ ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪ್ರಾಂಶುಪಾಲ ರಾಮೇಗೌಡ ಮಾತನಾಡಿ, ಅನುಭವಿ ಸಂಪನ್ಮೂಲ ವ್ಯಕ್ತಿಗಳು ಒಟ್ಟು 120 ತರಗತಿಗಳನ್ನು ನೀಡಲಿದ್ದಾರೆ. ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ತರಗತಿಗಳು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಸತತವಾಗಿ 3 ತರಗತಿಗೆ ಗೈರಾದವರಿಗೆ ತರಗತಿಗೆ ಬರಲು ಅವಕಾಶ ನಿಲ್ಲಿಸಲಾಗುವುದು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಸ್ನೇಹಜೀವಿ ಸಂಸ್ಥೆಯ ಮುಖ್ಯಸ್ಥ ಆನಂದ್, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಜನಾರ್ದನ್, ಯೋಗಣ್ಣ, ನಾಗರಾಜೇ ಅರಸ್, ನಾಗೇಗೌಡ, ರವೀಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ಶಶಿಕುಮಾರ್ ಇದ್ದರು.