ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರಿಗೆ 21 ಸಾವಿರ ರೂ.ಕನಿಷ್ಠ ವೇತನ ನೀಡಿ ಸೇವೆಯನ್ನು ಕಾಯಂಗೊಳಿಸಿ 10 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು ಎಂದು ಆಗ್ರಹಿಸಲಾಯಿತು.
ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿಯನ್ನು ರಕ್ಷಿಸಬೇಕು. ಅಂಗನವಾಡಿ ಕೇಂದ್ರದಲ್ಲೇ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿ, ಹೆಚ್ಚುವರಿ ಕೆಲಸ ನಿರ್ಬಂಧಿಸಬೇಕು. ಐಸಿಡಿಎಸ್‌ಗೆ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಈಗಾಗಲೇ ನಿವೃತ್ತಿಯಾದವರಿಗೆ ನಿವೃತ್ತಿ ವೇತನ ಬಿಡುಗಡೆ ಮಾಡಿ, ಎನ್‌ಪಿಎಸ್ ವಂತಿಗೆಯನ್ನು ಶೇ.10ಕ್ಕೆ ಹೆಚ್ಚಿಸಬೇಕು. ಎಲ್ಲರಿಗೂ ಪಿಂಚಣಿ ಒದಗಿಸಬೇಕು. ಕರೊನಾದಿಂದ ಮೃತರಾದ 26 ಜನ, ಕೆಲಸದ ಒತ್ತಡದಿಂದ ಮೃತರಾದ ಅಂಗನವಾಡಿ ನೌಕರರ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕು. ಇಲಾಖೆಯಿಂದಲೇ ಕೋಳಿಮೊಟ್ಟೆಯನ್ನು ಅಂಗನವಾಡಿಗಳಿಗೆ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಕುಟುಂಬಗಳಿಗೆ 7500 ರೂ. ನೀಡಬೇಕು. ಎಂ-ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಣೆ ಮಾಡಿ ಕನಿಷ್ಠ ಕೂಲಿ 600 ರೂ.ಹೆಚ್ಚಿಸಬೇಕು ಎಂದರು. ಮುಖಂಡರಾದ ಎಚ್.ಎಸ್.ಸುನಂದಾ, ಪುಷ್ಪಲತಾ, ಕಾವೇರಮ್ಮ ಇದ್ದರು.