ನ್ಯೂಸ್

ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ವೇದಪೀಠ ಪ್ರಶಸ್ತಿ ಉಡುಪಿ ಭಂಡರಕೇರಿ ಮಠ ಘೋಷಣೆ: ಬೆಳಗಾವಿಯಲ್ಲಿ ಮೇ 9 ರಂದು ಪ್ರಶಸ್ತಿ ಪ್ರಧಾನ

ಉಡುಪಿ ಶ್ರೀ ಭಂಡಾರಕೇರಿ ಮಠದಿಂದ ಕೊಡಮಾಡುವ ಪ್ರತಿಷ್ಠಿತ 'ವೇದಪೀಠ' ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಮೈಸೂರು ವಿಶ್ವ ವಿದ್ಯಾವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯ ( ಓಆರ್‌ಐ) ಆಯ್ಕೆಯಾಗಿದೆ.

ಭಾರತೀಯ ವಿದ್ಯೆ, ವೇದಶಾಸ್ತ್ರ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಸಂರಕ್ಷಿಸಿ, ಪೋಷಿಸಿ ಅಭಿವೃದ್ಧಿ ಪಡಿಸಲು ಗಣನೀಯವಾಗಿ ಶ್ರಮಿಸುತ್ತಿರುವ ಸಂಸ್ಥೆಯೊoದಕ್ಕೆ ಶ್ರೀ ಮಠವು ಪ್ರತಿವರ್ಷವೂ (ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಿ) 'ವೇದಪೀಠ' ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಉನ್ನತ ಮಟ್ಟದ ತಜ್ಞರ ಸಮಿತಿಯು ಪ್ರಶಸ್ತಿ ಘೋಷಣೆ ಮಾಡಿದೆ. 'ವೇದಪೀಠ ಪ್ರಶಸ್ತಿ'ಯು | ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆಗಳನ್ನು ಒಳಗೊಂಡಿದೆ ಎಂದು ಉಡುಪಿ ಶ್ರೀ ಭಂಡಾರಕೇರಿ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಬೆಳಗಾವಿಯ ಕೆ.ಕೆ. ವೇಣುಗೋಪಾಲ ಸಭಾಂಗಣದಲ್ಲಿ ಮೇ 9 ರಂದು ಶ್ರೀ ಮಠ, ಶ್ರೀ ಮಾಧ್ವ ರಾದ್ಧಾಂತ ಸಂವರ್ಧಕ ಸಭಾ, ಶ್ರೀ ಭಾಗವತಾಶ್ರಮ ಪ್ರತಿಷ್ಠಾನ ಮತ್ತು ಲೋಕಸಂಸ್ಕೃತಿ ಕಲಾ ವಿದ್ಯಾ ವಿಕಾಸ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜನೆ ಮಾಡಿರುವ ರಾಷ್ಟçಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವರಾದ್ಧಾಂತ ಸಂವರ್ಧಕ ಸಭಾ 82ನೇ ಅಧಿವೇಶನ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 25ನೇ ಅರಾಧನೋತ್ಸವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.

1891ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾದ 10ನೇ ಚಾಮರಾಜೇಂದ್ರ ಒಡೆಯರ್ ರವರು ಸ್ಥಾಪಿಸಿದ ಪ್ರಾಚ್ಯವಿದ್ಯಾ ಸಂಶೋಧನಾಲಯವು ಪ್ರಾಚೀನ ತಾಳಗರಿ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಸಂಶೋಧನೆ, ಸಂಪಾದನೆ ಮತ್ತು ಅವುಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಲು ಆಹರ್ನಿಷಿ ಶ್ರಮಿಸುತ್ತಿದೆ. ಈ ಸಂಸ್ಥೆಗೆ ಪ್ರಶಸ್ತಿ ಅರಸಿ ಬಂದಿರುವುದು ಹೆಮ್ಮೆ ಮತ್ತು ಗೌರವವಾಗಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಡಾ. ಡಿ.ಪಿ. ಮಧುಸೂದನಾಚಾರ್ಯ ತಿಳಿಸಿದ್ದಾರೆ.

ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿರುವ ಓಅರ್‌ಐ 1891 ರಿಂದ ಇಲ್ಲಿಯವರೆಗೆ 240 ಕ್ಕೂ ಹೆಚ್ಚು ಕೃತಿಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿದ ಕೀರ್ತಿಗೆ ಭಾಜನವಾಗಿದೆ. 70,000 ಕ್ಕೂ ಹೆಚ್ಚು ತಾಳೆ ಗರಿ ಮತ್ತು ಕಾಗದದ ಹಸ್ತಪ್ರತಿ ಗ್ರಂಥಗಳ ಸಂಗ್ರಹವಿರುವ ದೇಶದ ಮಹೋನ್ನತ ಸಂಸ್ಥೆಯಾಗಿದ್ದು, ಭಂಡಾರಕೇರಿ ಮಠವು ಈ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.

ಕ್ರಿ.ಪೂ 4ನೇ ಶತಮಾನದ ಕೌಟಿಲ್ಯನ ಅರ್ಥಶಾಸ್ತ್ರವನ್ನು ವಿಶ್ವದಲ್ಲೇ ಮೊದಲ ಬಾರಿಗೆ ಸಂಪಾದಿಸಿ ಪ್ರಕಟಿಸಿದ ಹೆಮ್ಮೆ ಓಆರ್‌ಐಗೆ ಇದೆ. ಇದರೊಂದಿಗೆ ನವರತ್ನಮಣಿ-ಮಹಾತ್ಮಂ (ರತ್ನಶಾಸ್ತ್ರದ ಕೃತಿ), ತಂತ್ರಸಾರ-ಸoಗ್ರಹ (ಕಿಲ್ಪ ಮತ್ತು ವಾಸ್ತುಶಿಲ್ಪದ ಕೃತಿ), ವೈದ್ಯ ಶಾಸ್ತ್ರ -ದೀಪಿಕಾ (ಆಯುರ್ವೇದ ಪಠ್ಯ), ರಸ-ಕೌಮುದಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಶ್ರೀ ತತ್ತ್ವನಿಧಿ, ಸ್ತೋತ್ರ ಗ್ರಂಥವೆನಿಸಿದ ಸೌಂದರ್ಯ ಲಹರಿ ಇವೇ ಮೊದಲಾದ ಅನೇಕ ಪ್ರತಿಷ್ಠಿತ ಕೃತಿಗಳು ಈಗಾಗಲೇ ಮುದ್ರಣಗೊಂಡಿವೆ.

ಇದೇ ಸಂದರ್ಭದಲ್ಲಿ ದೇಶದ ಅನೇಕ ಊರುಗಳಿಂದ ಮಠಮಾನ್ಯಗಳಿಂದ ಹಳ್ಳಿಹಳ್ಳಿಗಳಿಂದ ಹಸ್ತಪ್ರತಿಗಳನ್ನು ಖುದ್ದಾಗಿ ತಾವೇ ಹೋಗಿ ಸಂಗ್ರಹಿಸಿ ತಂದು ಸಂಶೋಧಿಸಿ ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರ ತರುವಲ್ಲಿ ಅವಿರತ ಶ್ರಮವಹಿಸಿದ ಪ್ರಾಚ್ಯವಿದ್ಯಾ ಸಂಶೋಧನಾಲಯದ ಡಾ.ಆರ್.ಶ್ಯಾಮ ಶಾಸ್ತಿçಗಳಿಂದ ಆರಂಭಿಸಿ ಇಲ್ಲಿಯವರೆಗೂ ಕೊಡುಗೆ ನೀಡಿದ ಎಲ್ಲಾ ವಿದ್ವಾಂಸರ ಪರಿಶ್ರಮವನ್ನು ತುಂಬು ಹೃದಯದಿಂದ ಸ್ಮರಿಸುತ್ತೇವೆ ಎಂದು ತಿಳಿಸಿದರು.

ವಿವಿಧ ಯೋಜನೆ ಮತ್ತು ದತ್ತಿಗಳಿಂದ ಸಂಸ್ಥೆಯು ಈಗಾಗಲೇ ಮೂಲ ತಾಳೆಗರಿ ಹಸ್ತಪ್ರತಿಗಳ ಮುದ್ರಿತ ಪುಸ್ತಕಗಳ ಸಂರಕ್ಷಣೆ ಮಾಡಿದ್ದು, ಇವುಗಳ ಡಿಜಿಟಲೀಕರಣ ಭರದಿಂದ ಸಾಗಿದ್ದು, ವಿಶ್ವದ ಜ್ಞಾನಾಸಕ್ತರಿಗೆ ಶೀಘ್ರದಲ್ಲೇ ದೊರಕಿಸಿಕೊಡುವ ಪ್ರಯತ್ನದಲ್ಲಿದ್ದೇವೆ. ಈ ಪ್ರಶಸ್ತಿಯ 1 ಲಕ್ಷ ರೂ. ಮೊತ್ತವನ್ನು ಪ್ರಾಚೀನ ಗ್ರಂಥ ಪ್ರಕಟಣೆ ಹಾಗೂ ಸಂಸ್ಥೆಯ ಅಭಿವೃದ್ಧಿಗಾಗಿ ಸದ್ವಿನಿಯೋಗ ಮಾಡಲಾಗುವುದು ಎಂದು ಮೈಸೂರು ವಿ.ವಿ ಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾದ ಡಾ. ಡಿ.ಪಿ. ಮಧುಸೂದನಾಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.