ಬಡಗಲಪುರ ನಾಗೇಂದ್ರ  
ನ್ಯೂಸ್

ಅ.9ರಂದು ರೈತ ಸಂಘದಿಂದ ರಾಜಭವನ ಚಲೋ

ಚನ್ನರಾಯಪಟ್ಟಣ: ಕ್ವಿಂಟಾಲ್ ಕೊಬ್ಬರಿಗೆ 25 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅ.9ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಈ ಭಾಗದಲ್ಲಿ ತೆಂಗು ಬಹು ಮುಖ್ಯ ಬೆಳೆಯಾಗಿದ್ದು, ರಾಜ್ಯದ 15 ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಕೊಬ್ಬರಿ ಬೆಲೆ ತೀವ್ರ ಕುಸಿತದಿಂದಾಗಿ ರೈತರ ಬದುಕು ದುಸ್ತರವಾಗಿದೆ. ಕೃಷಿ ಖರ್ಚಿನೊಂದಿಗೆ ಜೀವನೋಪಾಯ ಕಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಧನ ಸೇರಿ ಸದ್ಯ ಪ್ರತಿ ಕ್ವಿಂಟಾಲ್‌ಗೆ 13 ಸಾವಿರ ರೂ. ದರ ನಿಗದಿಗೊಳಿಸಲಾಗಿದೆ. ಗ್ರೇಡ್ ಪದ್ಧತಿಯಲ್ಲಿ ಕೊಳ್ಳುವುದರಿಂದ ಶೇ.10ರಷ್ಟು ಕೊಬ್ಬರಿಯನ್ನು ಖರೀದಿ ಮಾಡುತ್ತಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೋಟಗಾರಿಕಾ ಇಲಾಖೆ ಕಾರ್ಯದರ್ಶಿಗಳೇ ಒಂದು ಕ್ವಿಂಟಾಲ್ ಕೊಬ್ಬರಿಯ ಉತ್ಪಾದನಾ ವೆಚ್ಚ 16,760 ರೂ. ಎಂದಿದ್ದಾರೆ. ಈಗ ನೀಡಲಾಗುತ್ತಿರುವ ಪ್ರೋತ್ಸಾಹ ಧನವನ್ನು 25 ಸಾವಿರಕ್ಕೆ ನಿಗದಿ ಮಾಡಬೇಕು. ಮತ್ತು ವರ್ಷವಿಡೀ ಕೊಬ್ಬರಿ ಖರೀದಿ ಕೇಂದ್ರ, ನೋಂದಣಿ ಪ್ರಕ್ರಿಯೆ ನಡೆಯಬೇಕು. ಕೇಂದ್ರ ಸರ್ಕಾರ 20 ಸಾವಿರ ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ರಾಜ್ಯ ಸರ್ಕಾರ 5 ಸಾವಿರ ರೂ. ಪ್ರೋತ್ಸಾಹ ಧನ ಸೇರಿ ಕ್ವಿಂಟಾಲ್ ಕೊಬ್ಬರಿಗೆ 25 ಸಾವಿರ ರೂ. ನಿಗದಿ ಮಾಡಬೇಕೆಂದು ಆಗ್ರಹಿಸಿ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ತಿಪಟೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಸಾಗಿ ಅ.9ರಂದು ಫ್ರೀಡಂ ಪಾರ್ಕ್‌ನಲ್ಲಿ ರಾಜ ಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರ ಈಗಾಗಲೇ 136 ತಾಲೂಕುಗಳನ್ನು ಬರ ಘೋಷಣೆಗೆ ಮುಂದಾಗಿದೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಬರವನ್ನು ಶಾಶ್ವತವಾಗಿ ತೊಡೆದು ಹಾಕಲು ಯಾವುದೇ ಸರ್ಕಾರಗಳು ಮುಂದಾಗಿಲ್ಲ. ಬರ ಪರಿಹಾರವಾಗಿ ಭಿಕ್ಷೆ ರೂಪದಲ್ಲಿ ಪರಿಹಾರ ನೀಡಲಾಗುತ್ತದೆ. ಅವರು ನೀಡುವ ಪರಿಹಾರ ಬಿತ್ತನೆ ಬೀಜದ ಹಣಕ್ಕೂ ಸಮನಾಗುವುದಿಲ್ಲ. ಬರ ಘೋಷಣೆಯಾಗುವುದರಿಂದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗಷ್ಟೆ ಲಾಭ. ಈ ಮೂಲಕ ಅವರ ಖಜಾನೆ ತುಂಬುತ್ತದೆ ಎಂದರು.

ಬರ ಪ್ರದೇಶಗಳಲ್ಲಿ ಜಾನುವಾರುಗಳ ನಿರ್ವಹಣೆ, ಕುಡಿಯುವ ನೀರಿನ ನಿರ್ವಹಣೆ, ಜನಸಾಮಾನ್ಯರಿಗೆ ಉದ್ಯೋಗ ಸೃಷ್ಟಿ ಸೇರಿ ಪರ್ಯಾಯ ಕಾರ್ಯಕ್ರಮ ರೂಪಿಸುವಲ್ಲಿ ಮುಂದಾಗಬೇಕು. ಮತ್ತು ಇರುವ ಫಸಲು ಉಳಿಸಿಕೊಳ್ಳುವ ಸಲುವಾಗಿ ಕಡೇಪಕ್ಷ 4 ತಾಸು ನಿರಂತರ ವಿದ್ಯುತ್ ನೀಡಬೇಕು ಎಂದರು.

ರೈತ ಮುಖಂಡರಾದ ಹೊಸೂರು ಕುಮಾರ್, ಜಿಲ್ಲಾಧ್ಯಕ್ಷ ರಘು ಹಿರೀಸಾವೆ, ಜಿಲ್ಲಾ ಪದಾಧಿಕಾರಿಗಳಾದ ಇಮ್ರಾನ್ ಅಹಮ್ಮದ್, ಎಂ.ಎಲ್.ಹರೀಶ್, ತಾಲೂಕು ಅಧ್ಯಕ್ಷರಾದ ಎಸ್.ಎಸ್.ರಾಮಚಂದ್ರ, ರವಿಗೌಡಯ್ಯ, ಶಾಂತರಾಜ್ ಅರಸು, ಸೋಮೇಗೌಡ, ದಿನೇಶ್, ಶಿವಮೂರ್ತಿ ಇತರರು ಇದ್ದರು.