ಸಿಂಧನೂರು: ನಗರದಲ್ಲಿ ಅ.4 ರಿಂದ 12 ರವರೆಗೆ ಸಿಂಧನೂರು ದಸರಾ ಉತ್ಸವವನ್ನು ಸರ್ಕಾರದಿಂದ ಆಚರಿಸಲು ನಿರ್ಧರಿಸಲಾಗಿದೆ. ಅ.4 ರಂದು ಸಿಎಂ ಸಿದ್ದರಾಮಯ್ಯರಿಂದ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಪಕ್ಷಾತೀತವಾಗಿ ಉತ್ಸವ ಯಶಸ್ಸಿಗೆ ಶ್ರಮಿಸೋಣ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸರ್ಕೀಟ್ ಹೌಸ್‌ನಲ್ಲಿ ಸಿಂಧನೂರು ದಸರಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು. ಈಗಾಗಲೇ ಟೌನ್‌ಹಾಲ್ ಸೇರಿ ಹಲವೆಡೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ. 9 ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ಸವಕ್ಕೆ ಮೆರುಗು ನೀಡಲಾಗುವುದು. ಇಡೀ ನಗರವನ್ನು ದೀಪಾಲಂಕಾರಗೊಳಿಸಲಾಗುವುದು. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳು ಉತ್ಸವ ಸಮಿತಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಶಾಸಕ ಹಂಪನಗೌಡ ಬಾದರ್ಲಿ ವಿಶೇಷ ಆಸಕ್ತಿ ವಹಿಸಿ ಸರ್ಕಾರದಿಂದ ಸಿಂಧನೂರು ದಸರಾ ಉತ್ಸವ ಆಚರಣೆಗೆ ಮುಂದಾಗಿದ್ದು ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸೋಣ. ನಾವು ಮೊದಲಿನಿಂದಲೂ ಬನ್ನಿಯನ್ನೇ ಬಂಗಾರವಾಗಿಸಿಕೊಂಡು ಸೌಹಾರ್ದ ಮೆರೆದಿದ್ದೇವೆ. ಅದ್ದೂರಿ ಆಚರಣೆಗೆ ಸಹಕರಿಸೋಣ ಎಂದರು. ಮಾಜಿ ಸಚಿವ ಹಾಗೂ ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಮಾತನಾಡಿ, ಇದೊಂದು ಹೊಸತನದ ಕಾರ್ಯಕ್ರಮವಾಗಿದ್ದು, ಎಲ್ಲರನ್ನೊಳಗೊಂಡಂತೆ ಕಾರ್ಯಕ್ರಮ ರೂಪಿಸಿರುವುದು ಒಳ್ಳೆಯದು. ನವರಾತ್ರಿ ಉತ್ಸವಕ್ಕೆ ಮೆರಗು ಬರಲಿದೆ ಎಂದರು.
ಸಿಂಧನೂರು ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ದೇವೆಂದ್ರಗೌಡ ಮಾತನಾಡಿ, ಅ.4 ರಂದು ಸಂಜೆ ಆರ್‌ಜಿಎಂ ಶಾಲಾ ಮೈದಾನದಲ್ಲಿ ಜ್ಞಾನಪೀಠ ಅಷ್ಠರತ್ನಗಳ ನೃತ್ಯ, ಕೃತಿಗಳ ಸಾಲು ಅನಾವರಣ, ಅ.5 ರಂದು ಸಾಂಸ್ಕೃತಿಕ ದಸರಾದಲ್ಲಿ 7 ಕರೋಕೆ ಕಲಾವಿದರಿಂದ ಹಾಡು, ಗುರುರಾಜ ಹೊಸಕೋಟೆಯವರಿಂದ ಜಾನಪದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಅ.6 ರಂದು ಎಪಿಎಂಸಿ ಆವರಣದಲ್ಲಿ ರೈತರ ದಸರಾ, ಅ.7 ರಂದು ಮಹಿಳಾ ದಸರಾದಲ್ಲಿ ಕ್ರೀಡಾ ಸ್ಪರ್ಧೆ, ಆಹಾರ ಮೇಳ, ಅ.8 ರಂದು
ಟೌನ್‌ಹಾಲ್‌ನಲ್ಲಿ ನೌಕರ ದಸರಾ ಕಾರ್ಯಕ್ರಮದಲ್ಲಿ 7 ಜಿಲ್ಲೆಗಳ ಕವಿಗಳಿಂದ ಕವಿಗೋಷ್ಠಿ, ಆಹಾರ ಮೇಳ, ನೌಕರರಿಂದ ಕ್ರೀಡಾ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅ.9 ರಂದು ಮಹಿಳೆಯರು, ಪುರುಷರು ಹಾಗೂ ಯುವಕರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂದು ಸಂಜೆ ಹೊರ ರಾಜ್ಯದ ಕಲಾವಿದರಿಂದ ಲಾವಣಿ ಪದ ಕಾರ್ಯಕ್ರಮ ಇರಲಿದೆ. ಅ.10 ರಂದು ಚಿತ್ರಕಲೆ ಸ್ಪರ್ಧೆ ಆರ್‌ಜಿಎಂ ಶಾಲಾ ಮೈದಾನದಲ್ಲಿ ನಡೆಯಲಿದ್ದು ಸಂಜೆ ಕಲಾಕುಂಚ ಗಾಯನ, 13 ನೃತ್ಯ ರೂಪಕ ನಡೆಯಲಿವೆ. ಅ.11 ರಂದು ತಾಲೂಕು ಕ್ರೀಡಾಂಗಣದಲ್ಲಿ ಯುವ ದಸರಾ ಅಂಗವಾಗಿ ರಸಮಂಜರಿ ಕಾರ್ಯಕ್ರಮ, ಅ.12 ರಂದು ದಸರಾ ಸಮಾರೋಪ ಹಿನ್ನೆಲೆಯಲ್ಲಿ ಸಂಜೆ ಅಂಬಾರಿ ಮೆರವಣಿಗೆ, ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಉದ್ಯಮಿ ರಾಜೇಶ ಹಿರೇಮಠ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಎಸಿ ಬಸವಣೆಪ್ಪ, ಡಿವೈಎಸ್‌ಪಿ ಬಿ.ಎಸ್.ತಳವಾರ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಇಒ ಚಂದ್ರಶೇಖರ, ಜಿಪಂ ಮಾಜಿ ಸದಸ್ಯರಾದ ಎನ್.ಶಿವನಗೌಡ ಗೊರೇಬಾಳ, ಬಸವರಾಜ ಹಿರೇಗೌಡ್ರ, ಆರ್.ಸಿ. ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್ ಇತರರಿದ್ದರು.