ನ್ಯೂಸ್

ಅ.1ರಂದು 33ನೇ ವರ್ಷದ ಆಯುಧ ಪೂಜೆ

ನಾಪೋಕ್ಲು: ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ 33ನೇ ವರ್ಷದ ಆಯುಧ ಪೂಜೆ ಸಮಾರಂಭವನ್ನು ಅಕ್ಟೋಬರ್ ಒಂದರಂದು ಬುಧವಾರ ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ತಿಳಿಸಿದರು.

ಆಯುಧ ಪೂಜೆ ಅಂಗವಾಗಿ ಅ.1ರಂದು ಮಧ್ಯಾಹ್ನ 2 ಗಂಟೆಗೆ ಹಳೇ ತಾಲೂಕಿನಿಂದ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದೆ. ನಾಲ್ಕು ಗಂಟೆಗೆ ಮಾರುಕಟ್ಟೆ ಆವರಣದಲ್ಲಿ ವಾಹನಗಳ ಸಾಮೂಹಿಕ ಆಯುಧ ಪೂಜೆ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೈಕಲ್, ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಸಂಘದ ವತಿಯಿಂದ ವಿತರಿಸಲಾಗುವುದು.

ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ.ಸುಕುಮಾರ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರು ಆಗಿರುವ ಎ.ಎಸ್.ಪೊನ್ನಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಸೇರಿದಂತೆ ಇನ್ನಿತರ ಹಲವಾರು ಗಣ್ಯರು ಉಪಸ್ಥಿತರಿರುವರು ಎಂದರು.

ಸಭಾ ಕಾರ್ಯಕ್ರಮದ ಬಳಿಕ ಭದ್ರಾವತಿ ಬ್ರದರ್ಸ್ ಸೌಂಡ್ಸ್ ಲೈಟಿಂಗ್ಸ್ ಆ್ಯಂಡ್ ಇವೆಂಟ್ಸ್ ವತಿಯಿಂದ ಮನೋರಂಜನಾ ಕಾರ್ಯಕ್ರಮ ಹಾಗೂ ಉತ್ತಮ ಸೇವೆ ಸಲ್ಲಿಸಿದ ಆಟೋ ಚಾಲಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಸತೀಶ್, ಖಜಾಂಚಿ ಚೇತನ್, ಗೌರವ ಅಧ್ಯಕ್ಷ ರಜಾಕ್ ಸದಸ್ಯರಾದ ಮಿಥುನ್, ದೀಪು, ಸೋಮಣ್ಣ ಉಪಸ್ಥಿತರಿದ್ದರು.