ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ನಡೆಯುತ್ತಿರುವ ಈ ವರ್ಷದ ಕೃಷಿ ಹಾಗೂ ತೋಟಗಾರಿಕೆ ಮೇಳಕ್ಕೆ ಅ.21ರಂದು ತೆರೆಬೀಳಲಿದೆ. ಮೂರನೇ ದಿನವಾದ ಭಾನುವಾರ ಬೆಳಗ್ಗೆ ಸುರಿದ ಮಳೆಯ ನಡುವೆಯೂ ಮೇಳಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ತರಕಾರಿ ಹಾಗೂ ಹೂವಿನ ಗಿಡಗಳ ತಾಕುಗಳ ಪ್ರದರ್ಶನ, ಸಾವಯವ ಬಿತ್ತನೆ ಬೀಜದ ಬ್ಯಾಂಕ್, ಕೀಟ ಪ್ರಪಂಚ ಮುಂತಾದವುಗಳನ್ನು ಕಣ್ತುಂಬಿಕೊಂಡರು. ಶುಂಠಿ ಮತ್ತು ಕಾಳುಮೆಣಸು ವೈಜ್ಞಾನಿಕ ಕೃಷಿ, ಕೃಷಿ-ರೈತರ ಅನುಭವ, ಗೋಡಂಬಿ ಬೆಳೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಗೋಷ್ಠಿಗಳಲ್ಲಿ ವಿಜ್ಞಾನಿಗಳು, ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.
ತರಕಾರಿ ಗಿಡಗಳ ತಾಕು ವಿಶೇಷವಾಗಿ ಗಮನ ಸೆಳೆಯಿತು. ಬೆಂಡೆ, ಹುರುಳಿಕಾಯಿ, ಹಸಿರು ಬಟಾಣಿ, ಪಾಲಕ್, ಹರಿವೆಸೊಪ್ಪು, ಹೀರೇಕಾಯಿ, ಹಾಗಲಕಾಯಿ, ಪಡುವಲಕಾಯಿ ಜತೆಗೆ ಮೀಟರ್ ಅಲಸಂದೆ, ನೇರಳೆ ಬಣ್ಣದ ಬೀನ್ಸ್, ಹಸಿರು ಹಾಗೂ ಹಳದಿ ಝಕಿನಿ ಫಸಲನ್ನು ಜನರು ಕಣ್ತುಂಬಿಕೊಂಡರು.
ಇದೇ ತಾಕಿನಲ್ಲಿ ಅಲಂಕಾರಿಕ ಪುಷ್ಪಗಳು ಎಲ್ಲರ ಗಮನ ಸೆಳೆದವು. ಗಜೇನಿಯಾ, ಟೊರೇನಿಯಾ, ಜೇನಿಯಾ, ಡೇರೆ ಮತ್ತಿತರ ಹೂವುಗಳು ಅರಳಿ ನಿಂತಿದ್ದವು. ಕೃಷಿ ಕಾಲೇಜಿನ ವಿದ್ಯಾರ್ಥಿಗಳು ತಾಕುಗಳಲ್ಲಿರುವ ಬೆಳೆಗಳನ್ನು ಒಂದೆಡೆ ಜೋಡಿಸಿಕೊಂಡು, ಅವುಗಳ ಬಗ್ಗೆ ರೈತರಿಗೆ ವಿವರಣೆ ನೀಡುತ್ತಿದ್ದರು.
ಹಲಸಿನ ಹಣ್ಣಿನ ಮೌಲ್ಯವರ್ಧನೆಗೆ ಇತ್ತೀಚಿನ ದಿನಗಳಲ್ಲಿ ವಿವಿಯಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಹೀಗಾಗಿ ಮೇಳದಲ್ಲಿ ಹಲಸಿನ ವಿವಿಧ ಖಾದ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಲಸಿನ ಹಣ್ಣಿನ ಚಿಪ್ಸ್, ಹೋಳಿಗೆ ಎಲ್ಲರ ಮನಸೂರೆಗೊಂಡಿತು. ವಿವಿಧ ಸಂಘ ಸಂಸ್ಥೆಗಳು, ಸ್ವಸಹಾಯ ಸಂಘಗಳು ಉತ್ಪಾದಿಸಿ ತಿಂಡಿ ತಿನಿಸುಗಳಿಗೆ ಮೇಳದಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆಯಿತು.