Zubeen Garg: ಖ್ಯಾತ ಬಾಲಿವುಡ್ ಗಾಯಕ ಮತ್ತು ಅಸ್ಸಾಂ ಸಾಂಸ್ಕೃತಿಕ ನಾಯಕ ಜುಬೀನ್ ಗಾರ್ಗ್ ಸಾವಿಗೆ ಸಂಬಂಧಿಸಿದಂತೆ ಅವರ ಬ್ಯಾಂಡ್ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಪ್ರಕರಣಕ್ಕೆ ತಿರುವು ನೀಡಿದ್ದಾರೆ. ಜುಬೀನ್ ಗಾರ್ಗ್ ಅವರ ಸಾವು ಆಕಸ್ಮಿಕವಲ್ಲ, ವಿಷಪ್ರಾಶನ ಆಗಿರಬಹುದು ಎಂದು ಸ್ಫೋಟಕ ಆರೋಪ ಮಾಡಿದ್ದಾರೆ ಎಂದು ಶನಿವಾರ(ಅ. 04) ವರದಿಯಾಗಿದೆ.
ಸಾವಿನ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿತನಾಗಿರುವ ಶೇಖರ್ ಜ್ಯೋತಿ ಗೋಸ್ವಾಮಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಜುಬೀನ್ ಮ್ಯಾನೇಜರ್ ಸಿದ್ದಾರ್ಥ್ ಶರ್ಮಾ ಮತ್ತು ಈಶಾನ್ಯ ಭಾರತ ಉತ್ಸವ ಆಯೋಜಕ ಶ್ಯಾಮಕಾನು ಮಹಾಂತ ವಿರುದ್ಧ ವಿಷಪ್ರಾಶನದ ಗಂಭೀರ ಆರೋಪ ಮಾಡಿದ್ದಾರೆ.
ಸಿಂಗಾಪುರದಲ್ಲಿ ಜುಬೀನ್ ಅವರ ಸಾವಿಗೂ ಕೆಲವು ಗಂಟೆಗಳ ಮುನ್ನ ಸಿದ್ದಾರ್ಥ್ ಶರ್ಮಾ ಅವರ ನಡವಳಿಕೆ ಅನುಮಾನಾಸ್ಪದವಾಗಿತ್ತು. ದುರಂತದ ಸಮಯದಲ್ಲಿ ಬಲವಂತವಾಗಿ ನಾವಿಕನಿಂದ ದೋಣಿಯನ್ನು ತೆಗೆದುಕೊಂಡಿದ್ದರು. ಇದರಿಂದಾಗಿ ಅದು ಸಮುದ್ರದ ಮಧ್ಯದಲ್ಲಿ ದೋಣಿ ತೂಗಾಡಿ, ಅಪಘಾತಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾರೆ.
ಶರ್ಮಾ ಸಿಂಗಾಪುರ ಅಸ್ಸಾಂ ಅಸೋಸಿಯೇಷನ್ ಸದಸ್ಯರಿಗೆ ಮತ್ತು ಎನ್‌ಆರ್‌ಐ ತನ್ಮಯ್ ಫುಕಾನ್ ಅವರಿಗೆ ಪಾನೀಯಗಳನ್ನು ವ್ಯವಸ್ಥೆ ಮಾಡಬೇಡಿ ಎಂದು ಹೇಳಿದ್ದರು, ತಾನೊಬ್ಬನೇ ಅವುಗಳನ್ನು ಪೂರೈಸುತ್ತೇನೆ ಎಂದು ಒತ್ತಾಯಿಸಿದ್ದರು. ಜುಬೀನ್ ದೋಣಿಯಲ್ಲಿ ಸಮುದ್ರದಲ್ಲಿ ಡೈವಿಂಗ್ ಮಾಡುವಾಗ, ಉಸಿರುಗಟ್ಟಿ ಕಷ್ಟಪಡುತ್ತಿದ್ದಾಗ ಶರ್ಮಾ, ಜಬೋ ದೇ, ಜಬೋ ದೇ(ಅವನನ್ನು ಹೋಗಲು ಬಿಡಿ) ಎಂದು ಕೂಗುತ್ತಿದ್ದರು ಎಂದು ತಿಳಿಸಿದ್ದಾರೆ.
ಜುಬೀನ್ ಅವರು ತರಬೇತಿ ಪಡೆದ ಈಜುಗಾರರಾಗಿದ್ದರು. ಅವರು ತಮಗೆ ಮತ್ತು ಶರ್ಮಾ ಇಬ್ಬರಿಗೂ ತರಬೇತಿ ನೀಡಿದ್ದರು ಮತ್ತು ಆದ್ದರಿಂದ ಅವರು ಮುಳುಗಿ ಸಾವನ್ನಪ್ಪಿರಲು ಸಾಧ್ಯವಿಲ್ಲ.ಶರ್ಮಾ ಮತ್ತು ಮಹಾಂತ ಇಬ್ಬರೂ ಗಾಯಕನಿಗೆ ವಿಷಪ್ರಾಶನ ಮಾಡಿದ್ದಾರೆ ಮತ್ತು ತಮ್ಮ ಪಿತೂರಿಯನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಸಿಂಗಾಪುರವನ್ನು ಸ್ಥಳವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ದೋಣಿ ವೀಡಿಯೊಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಶರ್ಮಾ ತನಗೆ ಸೂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಜುಬೀನ್ ಅಸ್ವಸ್ಥರಾದ ತಕ್ಷಣದ ವೈದ್ಯಕೀಯ ಸಹಾಯವನ್ನು ಏರ್ಪಡಿಸುವ ಬದಲು, ಶರ್ಮಾ ಅವರು ತೆಗೆದುಕೊಂಡಿದ್ದ ಕ್ರಮಗಳು ಅವರ ಸಾವಿಗೆ ಕಾರಣವಾಗಿವೆ ಎಂದಿದ್ದಾರೆ. ಆದರೆ ವಿಚಾರಣೆ ಸಮಯದಲ್ಲಿ ಶರ್ಮಾ ಮತ್ತು ಮಹಾಂತ ಇಬ್ಬರೂ ಗೋಸ್ವಾಮಿ ಆರೋಪವನ್ನು ತಳ್ಳಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆದಾಗ್ಯೂ ಎಸ್ಐಟಿ ಇನ್ನೂ ತನಿಖೆಯನ್ನು ಮುಂದುವರೆಸಿದೆ. (ಎಜೆನ್ಸೀಸ್)